ಕೊಪ್ಪಳ: ಜಿಲ್ಲೆಯಲ್ಲಿ ಎರಡೂ ಹಂತದ ಗ್ರಾಮ ಪಂಚಾಯತ್ ಚುನಾವಣೆ ಮುಕ್ತಾಯಗೊಂಡಿದ್ದು ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಮತ ಎಣಿಕೆಗೆ ಕೇವಲ ಇನ್ನೊಂದೇ ದಿನ ಬಾಕಿ ಉಳಿದಿದ್ದು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಅಭ್ಯರ್ಥಿಗಳ ಜೊತೆಗೆ ಚುನಾವಣೆಯಲ್ಲಿ ಓಡಾಡಿರುವ ಹಳ್ಳಿ ಮುಖಂಡರಲ್ಲಿ ಹಾಗೂ ಜನರಲ್ಲಿಯೂ ರಿಸಲ್ಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕಾರಟಗಿ ಹಾಗೂ ಕನಕಗಿರಿ ಸೇರಿ ಒಟ್ಟು ಏಳು ತಾಲೂಕುಗಳ 149 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ಈಗಾಗಲೇ ಮತದಾನ ನಡೆದಿದೆ. ಜಿಲ್ಲೆಯ 149 ಗ್ರಾಮ ಪಂಚಾಯತ್ಗಳ 2,696 ಸ್ಥಾನಗಳಲ್ಲಿ 280 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ ಒಟ್ಟು 2,416 ಸ್ಥಾನಗಳಿಗೆ ನಡೆದ ಚುನಾವಣೆಯ ಅಂತಿಮ ಕಣದಲ್ಲಿರುವ ಒಟ್ಟು 6436 ಜನ ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರರು ಎರಡು ಹಂತದಲ್ಲಿ ಬರೆದು ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಾರೆ. ಆಯಾ ತಾಲೂಕುಗಳ ಮತಪೆಟ್ಟಿಗೆಗಳನ್ನು ಆಯಾ ತಾಲೂಕುಗಳಲ್ಲಿಯೇ ಸ್ಟ್ರಾಂಗ್ ರೂಮ್ ಸ್ಥಾಪಿಸಿ ಭದ್ರತೆಯಲ್ಲಿ ಇರಿಸಲಾಗಿದೆ.
ಇದೇ ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದ್ದು ಅಭ್ಯರ್ಥಿಗಳಲ್ಲಿ ಹಾಗೂ ಅವರ ಬೆಂಬಲಿಗರಲ್ಲಿ ಢವಢವ ಶುರುವಾಗಿದೆ. ಮತ ಎಣಿಕೆಗೆ ಕೇವಲ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿರುವುದರಿಂದ ಸಹಜವಾಗಿ ಕುತೂಹಲ ಹೆಚ್ಚಾಗಿದೆ. ಮತದಾನದ ದಿನದಂದು ತಮ್ಮ ವಾರ್ಡ್ನಲ್ಲಿರುವ ತಮ್ಮ ಪರವಾದ ಕುಟುಂಬಗಳಲ್ಲಿ ತಮಗೆ ಬರಬಹುದಾದ ಮತಗಳ ಲೆಕ್ಕಾಚಾರ ಹಾಕಿಕೊಂಡಿರುವ ಅಭ್ಯರ್ಥಿಗಳು ತಾವೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮಾತನಾಡದಿದ್ದರೂ ಕೆಲವರು ಮತದಾರರ ಕೈಕಾಲು ಮುಗಿದು ತಮಗೆ ಮತಹಾಕಿ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಮತದಾನದ ಬಳಿಕ ಆಗಿರುವ ಮತದಾನದ ಪ್ರಮಾಣದ ಮೇಲೆ ತಮ್ಮದೆ ರೀತಿಯಲ್ಲಿ ಅಭ್ಯರ್ಥಿಗಳು ಲೆಕ್ಕಾಚಾರ ಮಾಡಿಕೊಂಡಿದ್ದಾರೆ.