ಗಂಗಾವತಿ: ಕಳೆದ ಕೆಲ ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಜನ ವಸತಿ ಪ್ರದೇಶದಲ್ಲಿ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಇಲ್ಲಿನ ಸಿದ್ಧಿಕೇರಿ ರಸ್ತೆಯ ಆಂಜನೇಯ ಬಡವಾಣೆ ನಿವಾಸಿಗಳು ಆಗ್ರಹಿಸಿದ್ದಾರೆ.
ವಿದ್ಯುತ್ ಸೌಲಭ್ಯವಿಲ್ಲದೇ ಕಂಗಲಾದ ಬಡಾವಣೆ ನಿವಾಸಿಗಳು ಬಡವಾಣೆಗೆ ಅಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿಲ್ಲ. ಅವರಿವರ ಒತ್ತಾಯಕ್ಕೆ ಮಣಿದು ಟ್ರಾನ್ಸ್ಫಾರ್ಮರ್ ಹಾಕಿಸಲಾಗಿದೆ. ಆದರೆ ಟ್ರಾನ್ಸ್ಫಾರ್ಮರ್ ಸುಟ್ಟು ವಾರ ಕಳೆದರೂ ಕೂಡ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಬಡಾವಣೆಯ ಮುಖಂಡ ಹನುಮಂತಪ್ಪ ಸಿಂಗನಾಳ ಆರೋಪಿಸಿದ್ದಾರೆ.
ಬಡಾವಣೆಯ ಮಾಲೀಕ ನಗರಸಭೆಯಲ್ಲಿ ಲೇಔಟ ಅನುಮೋದಿಸಿಲ್ಲ. ಹೀಗಾಗಿ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ನೀಡಲು, ಅಥವಾ ಸಮಸ್ಯೆಯಾದರೆ ಸ್ಪಂದಿಸಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ನಮ್ಮ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸಮಸ್ಯೆಗೆ ಸಂಬಂಧಿತರು ಪರಿಹಾರ ಕಲ್ಪಿಸುವಂತೆ ವಾರ್ಡ್ ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಬಸ್ ದರ ಇಳಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಕರಾರಸಾ ನಿಗಮ!
ಇನ್ನೂ ಸ್ಥಳಕ್ಕೆ ಆಗಮಿಸಿದ 4ನೇ ವಾರ್ಡ್ನ ನಗರಸಭಾ ಸದಸ್ಯ ಶರಭೋಜಿರಾವ್ ಗಾಯ್ಕವಾಡ್, ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮತ್ತೊಮ್ಮೆ ಶಾಸಕರ ಮೂಲಕ ನಗರಸಭೆ ಅಧಿಕಾರಿ ಹಾಗು ಜೆಸ್ಕಾಂ ಸಿಬ್ಬಂದಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಯತ್ನ ಮಾಡುವುದಾಗಿ ತಿಳಿಸಿದರು.