ಕೊಪ್ಪಳ: ಗಂಗಾಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಜಿಲ್ಲಾ ಗಂಗಾಮತ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗಂಗಾಮತ ಸಮಾಜದ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಬಾರಕೇರ ಅವರು, ಗಂಗಾಮತ (ಕೋಲಿ) ಸಮಾಜವನ್ನು ಬೆಸ್ತರು, ಅಂಬಿಗ, ಬಾರ್ಕಿ, ಕಬ್ಬಲಿಗ, ಮೊಗವೀರ, ಸುಣಗಾರ, ಕಬ್ಬೇರ್ ಸೇರಿದಂತೆ 39 ಪರ್ಯಾಯ ಪದಗಳಿಂದ ಕರೆಯಲಾಗುತ್ತದೆ. ನಮ್ಮ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಅಭಿವೃದ್ಧಿ ಹೊಂದಲು ರಾಜಕೀಯ, ಶೈಕ್ಷಣಿಕ ಔದ್ಯೋಗಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಮೀಸಲಾತಿ ಅಗತ್ಯವಾಗಿದೆ.
ಗಂಗಾಮತ ಸಮಾಜದ ಜಿಲ್ಲಾ ಕಾರ್ಯದರ್ಶಿ ವಿರುಪಾಕ್ಷಪ್ಪ ಬಾರಕೇರ ಸುದ್ದಿಗೋಷ್ಠಿ ಈಗಾಗಲೇ ಹಂಪಿ ಕನ್ನಡ ವಿಶ್ವವಿದ್ಯಾಲಯ ಬುಡಕಟ್ಟು ಅಧ್ಯಯನ ವಿಭಾಗದಿಂದ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿಗೆ ಗಂಗಾಮತ ಅರ್ಹವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಲ್ಲಿನ ತಾಂತ್ರಿಕ ಪರಿಣಿತರ ತಂಡವು ಕೇಂದ್ರಕ್ಕೆ ಪ್ರಮಾಣಪತ್ರ ನೀಡಿದೆ. ಆದರೆ, ಕೇಂದ್ರ ಸರ್ಕಾರದ ಕೆಲ ಹಿತಾಸಕ್ತಿಗಳು ಉದ್ದೇಶ ಪೂರ್ವಕವಾಗಿ ಅಡೆತಡೆಗಳನ್ನು ಒಡ್ಡುತ್ತಿವೆ.
10-12 ರಾಜ್ಯಗಳಲ್ಲಿ ಈ ಸಮುದಾಯ ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಪಡೆದಿರುತ್ತದೆ. ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಮೊದಲು ತಾಲೂಕು ಹಂತದಲ್ಲಿ ಮತ್ತು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗುವುದು. ನಂತರ ರಾಜ್ಯ ಮಟ್ಟದಲ್ಲಿ ಏಕಕಾಲಕ್ಕೆ ಉಗ್ರ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.