ಗಂಗಾವತಿ:ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಗಂಗಾವತಿಯನ್ನು ಹಾಗೆ ಅಭಿವೃದ್ಧಿ ಮಾಡ್ತೇನೆ, ಹೀಗೆ ಅಭಿವೃದ್ಧಿ ಮಾಡ್ತೇನೆ ಎಂದು ಹೇಳುವವರು ಬಳ್ಳಾರಿಯಲ್ಲಿ ಏನು ಮಾಡಿದ್ದಾರೆ?. ಸುಳ್ಳುಗಳಿಂದಲೇ ಜನರವನ್ನು ವಂಚಿಸಲು ಯತ್ನಿಸುತ್ತಿರುವವರನ್ನು ಈ ಚುನಾವಣೆಯಲ್ಲಿ ಜನ ಇಲ್ಲಿಂದ ಫುಟ್ಬಾಲ್ ಆಡಿದಂತೆ ಆಡಬೇಕು. ಆ ಮೂಲಕ ನೇರವಾಗಿ ಬಳ್ಳಾರಿಗೆ ಹೋಗಿ ಬೀಳಬೇಕು ಹಾಗೆ ಮತದಾನದ ಮೂಲಕ ಉತ್ತರ ನೀಡಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪರೋಕ್ಷವಾಗಿ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ತಮ್ಮ ಗೃಹಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರನ್ನು ವಂಚಿಸುತ್ತಿರುವರಿಗೆ ದೊಡ್ಡ ಇತಿಹಾಸ ಇದೆ. ಇದನ್ನು ಜನ ತಿಳಿದುಕೊಳ್ಳಬೇಕು. ಗಂಗಾವತಿಗಿಂತಲೂ ಬಳ್ಳಾರಿ ದೊಡ್ಡದು ಮತ್ತು ಸುಂದರವಾಗಿದೆ. ಅಲ್ಲಿ ಏನು ಮಾಡಲಾಗದವರು ಇಲ್ಲಿಗೆ ಬಂದು ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.
ಫುಟ್ಬಾಲ್ ಚಿಹ್ನೆ ಪಕ್ಷಕ್ಕೆ ಸರಿಯಾಗಿಯೇ ಸಿಕ್ಕಿದೆ. ಜನ ಇಲ್ಲಿಂದ ಫುಟ್ಬಾಲ್ ಆಡಿದರೆ ಸೀದಾ ಬಳ್ಳಾರಿಗೆ ಹೋಗಿ ಬೀಳಬೇಕು. ಗಂಗಾವತಿ ವಿಧಾನಸಭಾ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಒಂದೇ ಒಂದು ಮತ ಹೊರಗಿನ ವ್ಯಕ್ತಿಗಳಿಗೆ ಹಾಕಬಾರದು ಎಂದು ಅನ್ಸಾರಿ ಪರೋಕ್ಷವಾಗಿ ರೆಡ್ಡಿ ಅವರನ್ನು ಬೆಂಬಲಿಸದಂತೆ ಮನವಿ ಮಾಡಿದರು. ಚುನಾವಣೆಯ ಬಳಿಕ ಅವರು ಹೊರಟು ಹೋಗ್ತಾರೆ. ಇಲ್ಲಿ ಇರಲು ಸಾಧ್ಯವೇ ಇಲ್ಲ. ಗಂಗಾವತಿಯ ಇತಿಹಾಸ ಅವರಿಗೆ ಗೊತ್ತಿಲ್ಲ. ಇಲ್ಲಿನ ಇತಿಹಾಸ ಜನರ ನಾಡಿ ಮಿಡಿತ ಅರಿಯಲು ಅವರಿಗೆ ಐವತ್ತು ವರ್ಷ ಬೇಕು. ಯಾಕೆಂದರೆ ನಾವು ಇಲ್ಲಿದ್ದೆ 63 ವರ್ಷ ವಯಸ್ಸಾಗಿದೆ ಎಂದ ಅನ್ಸಾರಿ, ನಾನು ಎಲ್ಲಿಗೇ ಹೋದರೂ ಜನ ನನಗೆ ವೋಟ್ ಹಾಕ್ತೀವಿ ಎಂದು ಹೇಳುತಿದ್ದಾರೆ ಎಂದರು.