ಕುಷ್ಟಗಿ(ಕೊಪ್ಪಳ):ಸರ್ಕಾರದ ಮಹಾತ್ವಾಕಾಂಕ್ಷೆಯ ಅಂತರ್ಜಲ ವೃದ್ಧಿಸುವ ಉದ್ದೇಶದ ಹಿನ್ನೆಲೆಯಲ್ಲಿ 2005-06ರಲ್ಲಿ 34.15 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ತಾಲೂಕಿನ ತಳವಗೇರಾ ಹೊರವಲಯದಲ್ಲಿ ಜಿನುಗು ಕೆರೆ ನಿರ್ಮಿಸಲಾಗಿತ್ತು. 2009 ರಲ್ಲಿ ಅತಿವೃಷ್ಟಿಗೆ ಈ ಕೆರೆಯ ವೇಸ್ಟವೇರ್ ಕೊಚ್ಚಿ ಹೋಗಿದ್ದರಿಂದ ಅಂದಿನಿಂದ ಇಂದಿನವರೆಗೂ ಜಿನುಗು ಕೆರೆಯ ಅಸ್ತಿತ್ವ ಕಳೆದುಕೊಂಡಿದೆ.
16.11 ಎಕರೆ ವಿಸ್ತೀರ್ಣದ ಮುಳಗುಡೆ ಪ್ರದೇಶ ಹೊಂದಿದ 2.3 ಎಂಸಿಎಫ್ ಟಿ ಜಲ ಸಾಂಧ್ರತೆ ಪ್ರದೇಶವಿದ್ದು, 58 ಮೀಟರ್ ಉದ್ದದ ಕೆರೆಯ ಏರಿ (ತಡೆಗೋಡೆ) 4.9 ಮೀಟರ್ ಎತ್ತರ, 2.50 ಮೀಟರ್ ಅಗಲದ ಈ ಕೆರೆಯಲ್ಲಿ ಮುಳ್ಳುಕಂಟಿಗಳು ಆವರಿಸಿದೆ. ಕೆರೆಯ ಪ್ರದೇಶದಲ್ಲಿ ಮರಳು ದಂಧೆ ನಡೆಯುತ್ತಿದ್ದು, ಕೆರೆಯ ಪ್ರದೇಶದಲ್ಲಿ ಮರಳು ಸಂಗ್ರಹಿಸಲಾಗಿದೆ, ಕೆರೆಯ ಪ್ರದೇಶ ಒತ್ತುವರಿಯಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಈ ಜಿನುಗು ಕೆರೆಯನ್ನು ಕಳಪೆಯಾಗಿ ನಿರ್ಮಿಸಿದ ಗುತ್ತಿಗೆದಾರನ ವಿರುದ್ಧ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಣ್ಣ ನೀರಾವರಿ ಇಲಾಖೆಯ ಧೋರಣೆ ನಿಜಕ್ಕೂ ಸಾರ್ವಜನಿಕರಲ್ಲಿ ಅಚ್ಚರಿ ತರಿಸಿದೆ.