ಕೊಪ್ಪಳ:ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ನವವೃಂದಾವನದಲ್ಲಿನ ಶ್ರೀ ವ್ಯಾಸರಾಜ ತೀರ್ಥರ ವೃಂದಾವನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಕೊಪ್ಪಳ ಜಿಲ್ಲಾ ಪೊಲೀಸರು ಹೆಡಮುರಿ ಕಟ್ಟಿದ್ದಾರೆ.
ಆಂಧ್ರದ ತಾಡಪತ್ರಿಯ ಪೊಲ್ಲಾರಿ, ಡಿ. ಮನೋಹರ, ಕೆ.ಕುಮ್ಮಟ ಕೇಶವ, ಬಿ. ವಿಜಯಕುಮಾರ್ ಹಾಗೂ ಟಿ. ಬಾಲನರಸಯ್ಯ ಬಂಧಿತ ಆರೋಪಿಗಳು. ಈ ಖದೀಮರುನಿಧಿಯಾಸೆಗಾಗಿ ಜುಲೈ 17 ರಂದು ರಾತ್ರಿ ವೃಂದಾವನ ಧ್ವಂಸಗೊಳಿಸಿದ್ದರು.ಆರೋಪಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಐದು ವಿಶೇಷ ತಂಡಗಳನ್ನು ರಚನೆ ಮಾಡಿತ್ತು. ಈಗ ಈ ತಂಡ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಹಾರೆ, ಗುದ್ದಲಿ, ಇನ್ನೋವಾ ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ತಿಳಿಸಿದರು.
ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿ ವ್ಯಾಸರಾಜರು ರಾಜಗುರುಗಳಾಗಿದ್ದರು. ಅವರ ವೃಂದಾವನದ ಕೆಳಗೆ ವಜ್ರ, ವೈಢೂರ್ಯ ಹಾಗೂ ನಿಧಿ ಇದೆ. ಈ ಸಂಪತ್ತನ್ನು ಕೆಳಗೆ ಹಾಕಿ ವೃಂದಾವನ ನಿರ್ಮಾಣ ಮಾಡಲಾಗಿದೆ ಎಂದುಕೊಂಡು ನಿಧಿಯ ಆಸೆಯಿಂದ ಈ ಆರೋಪಿಗಳು ವೃಂದಾವನ ಧ್ವಂಸಗೊಳಿಸಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕೃತ್ಯವೆಸಗಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ವೃಂದಾವನ ಧ್ವಂಸ ಪ್ರಕರಣವನ್ನು ಕೊಪ್ಪಳ ಜಿಲ್ಲಾ ಪೊಲೀಸ್ ಅತ್ಯಂತ ತ್ವರಿತವಾಗಿ ಭೇದಿಸಿದೆ ಎಂದು ಬಳ್ಳಾರಿ ವಲಯದ ಐಜಿಪಿ ಡಾ. ನಂಜುಂಡಸ್ವಾಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.