ಕೊಪ್ಪಳ: ಜಿಲ್ಲೆಯ ಅನೇಕ ಗ್ರಾಮಗಳಲ್ಲಿನ ರೈತರು ತಮ್ಮ ಭೂಮಿಯನ್ನು ಪೋಡಿ ಮಾಡಿಕೊಳ್ಳಲು ಆಗುತ್ತಿಲ್ಲ. ಫಾರ್ಮ್ ನಂಬರ್ 10 ಮಾಡಿಸಿಕೊಳ್ಳಲು ಆಗುತ್ತಿಲ್ಲ. ಈ ಹಿಂದೆ ಭೂಮಿಯ ಮರು ಸರ್ವೆ ನಡೆದಾಗ ಕಂದಾಯ ಹಾಗೂ ಭೂಮಾಪನ ಇಲಾಖೆಯ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಜಿಲ್ಲೆಯಲ್ಲಿ ಇಂದಿಗೂ ಸಹ ರೈತರು ತೊಂದರೆ ಅನುಭವಿಸುವಂತಾಗಿದೆ. ಪಹಣಿಗೂ ಆಕಾರ್ ಬಂದ್ಗೂ ತಾಳೆಯಾಗದ ಈ ಭೂ ಸಮಸ್ಯೆ ಇನ್ನೂ ಕಗ್ಗಂಟಾಗಿಯೇ ಉಳಿದುಕೊಂಡಿದೆ.
ಕೊಪ್ಪಳ ಜಿಲ್ಲೆಯ ಹಲವು ಗ್ರಾಮಗಳ ರೈತರು ಜಮೀನನ್ನು ಪೋಡಿ ಮಾಡಿಸಿಕೊಳ್ಳಲು ಆಗದೆ ಹತ್ತಾರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳ ಮಾಹಿತಿಯ ಪ್ರಕಾರ ಜಿಲ್ಲೆಯ ಸುಮಾರು 40 ಗ್ರಾಮಗಳಲ್ಲಿ ರೈತರ ಭೂಮಿಯ ಸಮಸ್ಯೆ ಇದೆ. ಪಹಣಿಗೂ ಹಾಗೂ ಆಕಾರಬಂದ್ಗೆ ತಾಳೆಯಾಗದೆ ಸಮಸ್ಯೆಯಾಗಿದೆ.
1963-64ರಲ್ಲಿ ಮರು ಸರ್ವೆ ನಡೆದಾಗ ಅಂದಿನ ಕಂದಾಯ ಹಾಗೂ ಭೂಮಾಪನ ಇಲಾಖೆಯ ಸಿಬ್ಬಂದಿ ಹೊಸ ಮತ್ತು ಹಳೆಯ ಸರ್ವೆ ನಂಬರ್ ಎರಡನ್ನೂ ಬರೆದ ಪರಿಣಾಮ ಈ ಸಮಸ್ಯೆ ಉಂಟಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಉತ್ತರಿಸುತ್ತಾರೆ.