ಗಂಗಾವತಿ: ಕಾರಟಗಿ ಹಾಗೂ ಗಂಗಾವತಿ ತಾಲೂಕುಗಳಲ್ಲಿ ರೈತರು ಕೊಯ್ಲಿನ ಬಳಿಕ ಭತ್ತದ ಹುಲ್ಲಿಗೆ ಬೆಂಕಿ ಹಚ್ಚುತ್ತಿದ್ದು, ಇದು ಅವೈಜ್ಞಾನಿಕವಾಗಿದೆ. ಇದರಿಂದ ಪರಿಸರದ ಮೇಲೆ ಹಾನಿಯಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಭತ್ತದ ಹುಲ್ಲಿಗೆ ಬೆಂಕಿ ಹಚ್ಚುವುದರಿಂದ ಪರಿಸರಕ್ಕೆ ಹಾನಿ: ವಿಜ್ಞಾನಿಗಳ ಎಚ್ಚರಿಕೆ - ಭತ್ತದ ಹುಲ್ಲಿಗೆ ಬೆಂಕಿಯಿಂದ ಪರಿಸರಕ್ಕೆ ಹಾನಿ
ಭತ್ತದ ಹುಲ್ಲಿಗೆ ಬೆಂಕಿ ಹಾಕುವುದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಅದರ ಬದಲು ಹಸುಗಳಿಗೆ ಆಹಾರವನ್ನಾಗಿ ಅಥವಾ ಎರೆಹುಳು ಗೊಬ್ಬರ ತಯಾರಿಸಲು ಡಿಕಾಂಪೋಸ್ ಸಿಂಪಡಣೆ ಮಾಡಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ. ರವಿ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಭತ್ತದ ಹುಲ್ಲು ಸುಡುವುದರಿಂದ ಪರಿಸರಕ್ಕೆ ನಾನಾ ಸಮಸ್ಯೆ ಉಂಟಾಗಲಿದೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಲಿದೆ. ಅಪಾಯಕಾರಿ ಕಣಗಳು ವಾತಾವರಣಕ್ಕೆ ಸೇರಿ ಜನರ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ ಎಂದು ಎಚ್ಚರಿಸಿದರು.
ಒಂದು ಟನ್ ಭತ್ತದ ಹುಲ್ಲು ನಾಶವಾಗುವುದರಿಂದ 3 ಕೆಜಿ ಕಣಗಳು ಉತ್ಪಾದನೆಯಾಗುತ್ತವೆ. 6 ಕೆಜಿ ಇಂಗಾಲದ ಮೊನಾಕ್ಸೈಡ್, 199 ಕೆಜಿ ಬೂದಿ, 3 ಕೆಜಿ ಸಲ್ಫರ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಪರಿಸರಕ್ಕೆ ಹಾನಿಯಾಗುತ್ತದೆ. ಅಲ್ಲದೇ ಇದೇ ಸಮಯದಲ್ಲಿ 5.5 ಕೆಜಿ ಸಾರಜನಕ, 2.3 ಕೆಜಿ ರಂಜಕ, 25 ಕೆಜಿ ಪೋಟ್ಯಾಷ್ ನಾಶವಾಗುತ್ತದೆ. ರೈತರು ಭತ್ತದ ಹುಲ್ಲಿಗೆ ಬೆಂಕಿ ಹಚ್ಚುವ ಬದಲಿಗೆ ಹಸುಗಳಿಗೆ ಆಹಾರವನ್ನಾಗಿ ಅಥವಾ ಎರೆಹುಳು ಗೊಬ್ಬರ ತಯಾರಿಸಲು ಡಿಕಾಂಪೋಸ್ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.