ಕುಷ್ಟಗಿ(ಕೊಪ್ಪಳ):ಗಂಗಾವತಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಮಟ್ಕಾ, ಜೂಜು, ಅಕ್ರಮ ಮರಳುಗಾರಿಕೆ ತಡೆಗೆ ಹಾಗೂ ಮಾದಕ ದ್ರವ್ಯ ಹತ್ತಿಕ್ಕಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದರು.
ಕುಷ್ಟಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಅವರು ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೆ ಸೂಕ್ಷ್ಮವಾಗಿ ತಿಳಿಸಿ ಸಹಕರಿಸಬೇಕಿದೆ ಎಂದರು.
ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಇಂತಹ ಅಕ್ರಮ ಚಟುವಟಿಕೆಗಳನ್ನು ಬಹಿರಂಗವಾಗಿ ಯಾರೂ ಮಾಡುವುದಿಲ್ಲ, ಎಲ್ಲವೂ ಗುಪ್ತವಾಗಿ ವ್ಯವಹರಿಸಲಾಗುತ್ತಿದ್ದು, ಸಾರ್ವಜನಿಕರು ಪೊಲೀಸರಿಗೆ ಖಚಿತ ಮಾಹಿತಿ ನೀಡಿದರೆ ನಿಗ್ರಹಿಸುವುದು ಸುಲಭವಾಗಲಿದೆ ಎಂದರು.
ಕೊರೊನಾ ವೈರಸ್ನಿಂದಾಗಿ ಜನ ತತ್ತರಿಸಿದ್ದು, ಇತ್ತೀಚಿನ ಬೆಳವಣಿಗೆಯಲ್ಲಿ ಯುವಕರು ಬಲಿಯಾಗುತ್ತಿದ್ದು, ಕರ್ತವ್ಯ ನಿರತ ಪೊಲೀಸರಿಗೂ ಪಾಸಿಟಿವ್ ಬಂದಿದೆ. ಸಾರ್ವಜನಿಕರು ಮುನ್ನೆಚ್ಚರಿಕೆಯಿಂದ ಇರಬೇಕು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮಾಸ್ಕ್ ಧರಿಸದೇ ಇದ್ದಲ್ಲಿ ದಂಡ ತೆರುವುದು ಅನಿವಾರ್ಯವಾಗಲಿದೆ ಎಂದರು.
ಕೊರೊನಾ ವೈರಸ್ ಮಾರಕ ಕಾಯಿಲೆ ಅಲ್ಲದಿದ್ದರೂ ಹೆದರಿಕೆಯಿಂದ ಜನ ಹೃದಯಘಾತದಿಂದ ಸಾಯುತ್ತಿದ್ದಾರೆ. ಇಂತಹ ಸಂಧರ್ಭಗಳಲ್ಲಿ ಆರೋಗ್ಯ ವೃಧ್ಧಿಸಿಕೊಳ್ಳುವುದು ಅಗತ್ಯವಾಗಿದೆ. ಪೊಲೀಸರು ಕೊರೊನಾ ಸೋಂಕಿಗೆ ಒಳಗಾದಲ್ಲಿ ಅವರ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬಲಾಗುತ್ತಿದೆ ಎಂದರು.
ಹನುಮನಾಳ ಹೊಸ ಪೊಲೀಸ್ ಠಾಣೆಯ ಬಗ್ಗೆ ಪ್ರಸ್ತಾಪಿಸಿದಾಗ ಪ್ರಕರಣಗಳ ಸಂಖ್ಯೆಯ ಅಧಾರದಲ್ಲಿ ಹೊಸ ಠಾಣೆಗೆ ಮಂಜೂರಾತಿ ನೀಡುವ ನಿಯಮವಿದೆ ಎಂದರು. ಸಿಪಿಐ ಚಂದ್ರಶೇಖರ ಜಿ, ಪಿಎಸ್ಐ ಚಿತ್ತರಂಜನ್ ನಾಯಕ್ ಉಪಸ್ಥಿತರಿದ್ದರು.