ಗಂಗಾವತಿ:ನಗರಸಭೆಗೆ ಆಯ್ಕೆಯಾಗಿರುವ 25ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸಿ. ವೆಂಕಟರಮಣ, ಸುಳ್ಳು ಜಾತಿ ಪತ್ರ ನೀಡಿ ಆಯ್ಕೆಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಇವರ ಮತ ಪರಿಗಣಿಸಬಾರದು ಎಂದು ಪರಾಜಿತ ಅಭ್ಯರ್ಥಿ ಜಿ.ಕೆ. ರಾಮ ಅವರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಸಿ. ವೆಂಕಟರಮಣ ಮೂಲತಃ ಆಂಧ್ರದಿಂದ ವಲಸೆ ಬಂದಿದ್ದು, ಅಲ್ಲಿನ ಶಾಲಾ ದಾಖಲೆಗಳಲ್ಲಿನ ಜಾತಿ ಕಲಂನಲ್ಲಿ ಶೆಟ್ಟಿ ಬಲಿಜ ಎಂದಿದೆ. ಆದರೆ, ಇಲ್ಲಿನ ಶಾಲಾ ದಾಖಲಾತಿಗಳಲ್ಲಿ ಶೆಟ್ಟಿಬಲಿಜಾ ದಾಸರ ಎಂದು ತಿದ್ದಿದ್ದಾರೆ. ಈ ಮೂಲಕ ಮೀಸಲಾತಿಯನ್ನು ದುರುಪಯೋಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಳೆದ ಎರಡು ವರ್ಷದಿಂದ ಕಾನೂನು ಹೋರಾಟ ಮಾಡಲಾಗುತ್ತಿದೆ. ಈಗಾಗಲೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ಸಿ. ವೆಂಕಟರಮಣ ಅವರ ಜಾತಿ ಪ್ರಮಾಣಪತ್ರ ನಕಲಿ ಎಂದು ಕೊಪ್ಪಳ ಜಿಲ್ಲಾಧಿಕಾರಿಗೆ ಕಳೆದ ವರ್ಷ ಪತ್ರಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆ ನ.2ರಂದು ನಗರಸಭೆಗೆ ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ವೆಂಕಟರಮಣ ಅವರಿಗೆ ಮತದಾನಕ್ಕೆ ಅವಕಾಶ ನೀಡಬಾರದು, ಒಂದೊಮ್ಮೆ ಅವರು ಮತದಾನ ಮಾಡಿದರೂ ಜಾತಿ ಪ್ರಮಾಣ ಪತ್ರದ ವಿವಾದ ಇತ್ಯರ್ಥ ಆಗುವರೆಗೂ ಅವರ ಮತದಾನದ ವಿವರವನ್ನು ತಡೆ ಹಿಡಿಯಬೇಕು ಎಂದು ರಾಮ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.