ಕುಷ್ಟಗಿ (ಕೊಪ್ಪಳ): ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಿದ ಪರಿಣಾಮದಿಂದಾಗಿ ಮಹಾರಾಷ್ಟ್ರ ಮೂಲದ ವಲಸೆ ಕುಟುಂಬವೊಂದು ತಮ್ಮ ರಾಜ್ಯಕ್ಕೆ ಮರಳಲು ಸಾಧ್ಯವಾಗದೇ, ಇಲ್ಲಿನ ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮದಲ್ಲಿ ಉಳಿದುಕೊಂಡಿದೆ.
ಕೊರೊನಾ ಭೀತಿ: ರಾಜ್ಯದಲ್ಲೇ ಉಳಿದುಕೊಂಡ ಮಹಾರಾಷ್ಟ್ರದ ಕುಟುಂಬ - Maharastra Family
ವಲಸೆ ಕುಟುಂಬವೊಂದು ತಮ್ಮ ರಾಜ್ಯ ಮಹಾರಾಷ್ಟ್ರಕ್ಕೆ ತೆರಳಲು ಸಾಧ್ಯವಾಗದೆ ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮದಲ್ಲಿ ಉಳಿದುಕೊಂಡಿದೆ. ಸದ್ಯ ಇವರ ಬದುಕು ಅತಂತ್ರವಾಗಿದ್ದು, ಸಹಾಯ ಹಸ್ತ ಚಾಚುವಂತೆ ಕೋರಿದ್ದಾರೆ.
ಕುಷ್ಟಗಿ ಸಮೀಪದ ಹಿರೇಅರಳಹಳ್ಳಿ ಗ್ರಾಮದಲ್ಲಿ ಕಳೆದ ಮಾರ್ಚ್ 13ರಂದು ನಡೆದ ಶ್ರೀ ಶರಣಬಸವೇಶ್ವರ ಜಾತ್ರೆಗೆ ಬಂದ ಮಹಾರಾಷ್ಟ್ರ ಮೂಲದವರು ಈವರೆಗೂ ಇಲ್ಲಿಯೇ ಉಳಿದುಕೊಂಡಿದ್ದಾರೆ. ತೂಗುಯ್ಯಾಲೆಯ ತೊಟ್ಟಿಲ ಕಟ್ಟಿ, ಗಾಲಿ ತಿರುಗಿಸಿ, ಜನರನ್ನು ಮನರಂಜಿಸಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಕುಟುಂಬಕ್ಕೆ ಇದೀಗ ದಿಕ್ಕು ತೋಚದಂತಾಗಿದೆ. ತಮ್ಮ ಕುಟುಂಬದ 20 ಸದಸ್ಯರಿಗೆ ಬದುಕು ಕಟ್ಟಿಕೊಟ್ಟಿದ್ದ ತೂಗುಯ್ಯಾಲೆ ನಿಲ್ಲಿಸಿ, ಕಟ್ಟಿದ ತೊಟ್ಟಿಲ ಸರಂಜಾಮುಗಳನ್ನು ಕೆಳಗಿಳಿಸಲಾಗಿದೆ. ಕೆಲಸವಿಲ್ಲದೇ ಪರದಾಡಿದ ಈ ಜನಕ್ಕೆ ಗ್ರಾಮದ ಜನ ಸಂಕಷ್ಟ ಕಾಲದಲ್ಲಿ ಆಹಾರ ಪದಾರ್ಥ ನೀಡಿ, ಮಾನವೀಯತೆ ಮೆರೆದಿದ್ದಾರೆ. ಸದ್ಯ ಇವರೆಲ್ಲರೂ ಕಟ್ಟಡ ಕಟ್ಟುವ ಕೆಲಸದಲ್ಲಿ ಕಾರ್ಮಿಕರಾಗಿ, ಹೊಲದಲ್ಲಿ ಕೃಷಿ ಕೂಲಿಕಾರರಾಗಿ ದುಡಿದು ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಉತ್ತಗಿ ಗ್ರಾಮದ ನಿವಾಸಿಗಳಾದ ಇವರಿಗೆ ತವರು ರಾಜ್ಯ ಸೇರಬೇಕೆನ್ನಿಸಿದೆ. ಈ ಕುಟುಂಬದ ಯಜಮಾನ ಶಾತಪ್ಪ ಇಂಗೋಲಿಯವರದ್ದು 20 ಜನರ ತುಂಬು ಕುಟುಂಬ. ಸದ್ಯ ಇವರು ಬಾಗಲಕೋಟೆ ಜಿಲ್ಲೆಯ ಅನಗವಾಡಿಗೆ ವಲಸೆ ಹೋಗಲು ಯೋಜಿಸಿದ್ದು, ಅಲ್ಲಿಯೂ ತಮ್ಮ ಕೆಲಸಕ್ಕೆ ಕುತ್ತು ಬಂದರೆ, ಸ್ವಂತ ರಾಜ್ಯದಲ್ಲಿ ಕೊರೊನಾ ಕಡಿಮೆಯಾದಾಗ ತೆರಳುವುದಾಗಿ ತಿಳಿಸಿದ್ದಾರೆ. ತಮ್ಮ ಬದುಕೇ ಅತಂತ್ರವಾಗಿದ್ದರೂ ತಾವು ವಾಸಿಸುತ್ತಿರುವ ತಾತ್ಕಾಲಿಕ ಟೆಂಟ್ನಲ್ಲಿ 20ಕ್ಕೂ ಅಧಿಕ ನಾಯಿಗಳು, 10 ಪಾರಿವಾಳಗಳು ಹಾಗೂ ಕೋಳಿಗಳನ್ನು ಸಾಕಿಕೊಂಡಿರುವುದು ಗಮನಾರ್ಹವೆನಿಸಿದೆ.