ಕೊಪ್ಪಳ : ಹೆರಿಗೆಗೆ ಆಗಮಿಸಿದ್ದ ಮಹಿಳೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ಗರ್ಭದಲ್ಲೇ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ವಿರುಪಾಪುರ ಗ್ರಾಮಸ್ಥರು ಹಾಗೂ ಕೆಲ ದಲಿತಪರ ಸಂಘಟನೆಗಳ ಮುಖಂಡರು ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆ ಮುಂದೆ ಶಿಶುವಿನ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಘಟನೆ ಹಿನ್ನೆಲೆ : ಕುಷ್ಟಗಿ ತಾಲೂಕಿನ ವಿರುಪಾಪುರ ಗ್ರಾಮದ ಗರ್ಭಿಣಿಗೆ ಮಂಗಳವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿಂದೆ ಇವರಿಗೆ ಮೂವರು ಮಕ್ಕಳ ಸಹಜ ಹೆರಿಗೆಯಾಗಿತ್ತು. ಹಾಗಾಗಿ, ಅನಗತ್ಯವಾಗಿ ಶಸ್ತ್ರಚಿಕಿತ್ಸೆ ನಡೆಸುವುದು ಬೇಡ, ಕಾದು ನೋಡೋಣ ಎಂದು ಮಹಿಳೆಯ ಆರೋಗ್ಯ ತಪಾಸಣೆ ನಡೆಸಿದ್ದ ವೈದ್ಯೆ ಕುಟುಂಬಸ್ಥರಿಗೆ ವಿವರಿಸಿದ್ದರು. ಇದಾಗಿ ಒಂದು ದಿನ ಕಳೆದರೂ ಸಹ ಸಹಜ ಹೆರಿಗೆ ಆಗಲಿಲ್ಲ. ಬುಧವಾರ ಮತ್ತೆ ಗರ್ಭಿಣಿಯನ್ನು ಪರೀಕ್ಷಿಸಿದಾಗ ಮಗು ಗರ್ಭದಲ್ಲಿಯೇ ಮೃತಪಟ್ಟಿತ್ತು. ಇದರಿಂದ ತಾಯಿ ಆರೋಗ್ಯಕ್ಕೆ ಕುತ್ತು ಬರದಿರಲೆಂದು ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಮೃತ ಗಂಡು ಶಿಶುವನ್ನು ಹೊರ ತೆಗೆದಿದ್ದಾರೆ.
ಆಸ್ಪತ್ರೆ ಮುಂಭಾಗ ಪ್ರತಿಭಟನೆ :ಇನ್ನುಗಂಡುಮಗು ಮೃತಪಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯ ಸಂಬಂಧಿಕರು ವೈದ್ಯರ ಅಮಾನತಿಗೆ ಆಗ್ರಹಿಸಿ ಆಸ್ಪತ್ರೆ ಮುಂಭಾಗದಲ್ಲಿ ಶಿಶುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು. ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ, ಆಸ್ಪತ್ರೆಗೆ ಬಂದ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ್ದರೆ ಮಗು ಬದುಕುಳಿಯುತ್ತಿತ್ತು ಎಂದು ಆರೋಪಿಸಿದರು.
ಇದನ್ನೂ ಓದಿ :ಗರ್ಭಿಣಿ ಹೊಟ್ಟೆಯಲ್ಲಿ ನವಜಾತ ಶಿಶು ಸಾವು : ಕಾವಾಡಿಗರಹಟ್ಟಿಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಭೇಟಿ