ಗಂಗಾವತಿ: ಆಸ್ಪತ್ರೆಗೆ ಆಗಮಿಸಿದರೂ ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೇ ಆಸ್ಪತ್ರೆ ಬಾಗಿಲ ಬಳಿ ಹೆರಿಗೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಬೋಲಾ ಇಂದು ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಕರ್ತವ್ಯ ಲೋಪ ತೋರಿದ ವೈದ್ಯನನ್ನು ಕೂಡಲೇ ಸೇವೆಯಿಂದ ಅಮಾನತು ಮಾಡುವಂತೆ ಅವರು ಒತ್ತಾಯಿಸಿದರು.
ಈ ಬಗ್ಗೆ ಈಟಿವಿ ಭಾರತದಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ಗಮನಿಸಿದ ಭಾಗ್ಯವತಿ, ಕನಕಗಿರಿಯ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ, ಮಗು ಮತ್ತು ತಾಯಿಯ ಆರೋಗ್ಯ ವಿಚಾರಿಸಿದರು.
ವೈದ್ಯರ ಅಮಾನತಿಗೆ ಭಾಗ್ಯವತಿ ಬೋಲಾ ಆಗ್ರಹ ಬಳಿಕ ಮಹಿಳೆಯ ಕುಟುಂಬಸ್ಥರಿಂದ ಘಟನೆಯ ಬಗ್ಗೆ ಪೂರಕ ಮಾಹಿತಿ ಪಡೆದುಕೊಂಡರು. ದೂರವಾಣಿ ಮೂಲಕ ಡಿಎಚ್ಓ, ಆಲಕನಂದಾ ಅವರನ್ನು ಸಂಪರ್ಕಿಸಿ, ವೈದ್ಯನನ್ನು ಸೇವೆಯಿಂದ ವಜಾ ಮಾಡುವಂತೆ ಕೋರಿದರು. ಇದಕ್ಕೆ ಡಿಎಚ್ಒ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ; ಪ್ರಸವ ವೇದನೆ ತಾಳದೇ ಆಸ್ಪತ್ರೆ ಎದುರೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯ ಹೆಚ್ಚಾಗಿದೆ. ಪರಿಣಾಮ, ಪ್ರತಿಯೊಂದು ಕಾಯಿಲೆಗೆ ಗಂಗಾವತಿಗೆ ಹೋಗಬೇಕಿದ್ದು, ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.