ಕೊಪ್ಪಳ :ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಜನರ ಆರೋಗ್ಯ ಕಾಪಾಡಲು ಯೋಜನೆ ರೂಪಿಸದವರು ಅಧಿಕಾರದಲ್ಲಿರಬಾರದು ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆೇ
ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ತಂಗಡಗಿ, ಹಿಟ್ನಾಳ್ ಆರೋಪ ಓದಿ: ಗಮನಿಸಿ; ಮೇ 17 ರಿಂದ ಐದು ದಿನ ಕೊಪ್ಪಳ ಜಿಲ್ಲೆ ಕಂಪ್ಲೀಟ್ ಲಾಕ್ಡೌನ್
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಶಿವರಾಜ ತಂಗಡಗಿ, ತಜ್ಞರ ಎಚ್ಚರಿಕೆಯ ನಡುವೆಯೂ ಸರ್ಕಾರ ಬೇಜವಾಬ್ದಾರಿಯಿದ ನಡೆದುಕೊಳ್ಳುತ್ತಿದೆ ಎಂದರು. ಕೊರೊನಾ ಎರಡನೇ ಅಲೆ ಭೀತಿಯನ್ನು ಸೃಷ್ಠಿಸಿದೆ.
ಸೋಂಕಿತರಿಗೆ ಬೆಡ್, ಆಕ್ಸಿಜನ್ ಸಿಗುತ್ತಿಲ್ಲ. ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಇದೇ ಪರಿಸ್ಥಿತಿ ಎದುರಾಗಿದೆ. ಸೋಂಕಿತರು ವೆಂಟಿಲೇಟರ್‌ಗೆ ಅಡ್ಮಿಟ್ ಆದರೆ ಅವರು ಬದುಕಿ ಬರುತ್ತಾರೆ ಎನ್ನುವ ಭರವಸೆ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ ಸೋಂಕು ಕಡಿಮೆಯಾಗಿದೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮ ಹೇಳಿಕೆ ನೀಡುತ್ತಾರೆ. ಆದರೆ, ಸಾವನ್ನಪ್ಪಿದವರ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಸಿಗುತ್ತಿಲ್ಲ, ಇವರಿಗೆ ನಾಚಿಕೆಯಾಗಬೇಕು ಎಂದರು.
ಎರಡು ಲಕ್ಷ ಕೋಟಿಯ ಬಜೆಟ್ ನಮ್ಮ ರಾಜ್ಯದ್ದು, ಈಗ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬೇಕು. ಕೊರೊನಾ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು. ಬಡವರಿಗೆ 10 ಸಾವಿರ ರೂಪಾಯಿ ಸಹಾಯ ಮಾಡಿ ಲಾಕ್ ಡೌನ್ ಮಾಡಬೇಕು ಎಂದರು.
ಪರಿಹಾರ ಕೇಳಿದರೆ ಈಶ್ವರಪ್ಪ ನೋಟ್ ಪ್ರಿಂಟ್ ಮಾಡುತ್ತಿಲ್ಲ ಎಂದು ಹೇಳುತ್ತಾರೆ. ನಾವು ಅವರ ಮನೆಯ ದುಡ್ಡು ಕೇಳುತ್ತಿಲ್ಲ, ಜನರ ತೆರಿಗೆಯ ದುಡ್ಡನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಈ ಬಾರಿ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ ಕೊರೊನಾ ನಿಯಂತ್ರಣಕ್ಕೆ ಕೊಡಿ.
ನಿಮಗೆ ಆಡಳಿತ ಮಾಡಲು ಬರದಿದ್ದರೆ ಅಧಿಕಾರ ಬಿಟ್ಟು ಬನ್ನಿ. ಕೇವಲ ಸಭೆ ಮಾಡುವುದರಿಂದ ಏನೂ ಆಗುವುದಿಲ್ಲ ಎಂದು ಹರಿಹಾಯ್ದರು. ಅಲ್ಲದೆ, ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ತಲಾ ಐದು ಆಕ್ಸಿಜನ್ ಕಾನ್ಸಂಟ್ರೇಟ್ ನೀಡಲು ನಿರ್ಧರಿಸಲಾಗಿದೆ.
ಇನ್ನು, ಕೊರೊನಾ ಹೆಚ್ಚಳಕ್ಕೆ ವಿರೋಧ ಪಕ್ಷದವರು ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಾಚಿಕೆಯಾಗಬೇಕು ಅವರಿಗೆ, ಏಳು ವರ್ಷದಲ್ಲಿ ದೇಶವನ್ನು ಹಾಳು ಮಾಡಿದರು. ಮತ್ತೊಬ್ಬರ ಬಗ್ಗೆ ಆಪಾದಿಸುವುದನ್ನು ಬಿಟ್ಟು ಕೆಲಸ ಮಾಡಲಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಹಿಟ್ನಾಳ್ ಆರೋಪ :ಕೊರೊನಾ ಎರಡನೇ ಅಲೆಯ ಕುರಿತು ತಜ್ಞರು ನೀಡಿದ ಎಚ್ಚರಿಕೆಯನ್ನು ಸರ್ಕಾರ ಕಡೆಗಣಿಸುವ ಮೂಲಕ ಎಡವಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕೊರೊನಾ ಎರಡನೇ ಅಲೆಯ ಕುರಿತಂತೆ ತಜ್ಞರು ಎಚ್ಚರಿಕೆ ನೀಡಿದ್ದರು. ಆದರೆ, ಸರ್ಕಾರ ಅದನ್ನು ಕಡೆಗಣಿಸುವ ಮೂಲಕ ಕೊರೊನಾ ನಿಯಂತ್ರಣದಲ್ಲಿ ಎಡವಿದೆ.
ಆಕ್ಸಿಜನ್, ವೆಂಟಿಲೇಟರ್ ಗಳ ಜೊತೆಗೆ ವೈದ್ಯರು ಸಹ ಅಗತ್ಯ. ಹೀಗಾಗಿ ವೈದ್ಯರನ್ನು ಹೆಚ್ಚಿನ ಸ್ಯಾಲರಿ ನೀಡಿಯಾದರೂ ನೇಮಕಾತಿ ಮಾಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ವೈದ್ಯರಿಗೆ ಹೆಚ್ಚಿನ ಸ್ಯಾಲರಿ ನೀಡುವುದರಲ್ಲಿ ತಪ್ಪೇನಿಲ್ಲ.
ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಸೆಮಿ ಲಾಕ್ ಡೌನ್ ಮಾಡಿದ್ದು, ಆದರೆ ಪ್ರಯೋಜನವಾಗುತ್ತಿಲ್ಲ. ಜನರು ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದು, ವಾಹನಗಳು ಯಥಾ ಪ್ರಕಾರ ಓಡಾಡುತ್ತಿವೆ.
ಹೀಗಾಗಿ, ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ, ಎರಡನೇ ಅಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 116 ರಿಂದ 125 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ನಮ್ಮ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 150 ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ.
ಬೇರೆ ಜಿಲ್ಲೆಯ ಸೋಂಕಿತರು ಇಲ್ಲಿ ಸಾವನ್ನಪ್ಪಿದರೆ ಆ ಸಂಖ್ಯೆಯನ್ನು ಆ ಜಿಲ್ಲೆಗೆ ನೀಡುತ್ತಿದ್ದಾರೆ ಎಂದರು. ಹೋಂ ಐಸೋಲೇಷನ್ ಮಾಡುವುದರಿಂದ ಸೋಂಕು ನಿಯಂತ್ರಿಸಲು ಆಗುವುದಿಲ್ಲ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದರು.
ಮಠದ ವೃದ್ಧಾಶ್ರಮದಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಮಾಡಿ ಸಿಬ್ಬಂದಿಯನ್ನು ಒದಗಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್, ಹಾಸಿಗೆ, ಸಿಬ್ಬಂದಿಯನ್ನು ಸಿದ್ದ ಮಾಡಬೇಕಿತ್ತು ಎಂದರು. ಇನ್ನು, ಬೆಂಗಳೂರಿನಲ್ಲಿ ಕೇಸ್ ಕಡಿಮೆಯಾಗುತ್ತಿವೆ ಎಂದು ಹೇಳುತ್ತಾರೆ.
ಏಕೆಂದರೆ, ಅಲ್ಲಿನ ಜನರು ಹಳ್ಳಿಗಳಿಗೆ ವಾಪಾಸ್ ಬಂದಿದ್ದಾರೆ. ಈಗ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ವ್ಯಾಕ್ಸಿನ್ ವಿಷಯದಲ್ಲಿಯೂ ಸಹ ಎಡವಿದೆ ಎಂದರು.