ಗಂಗಾವತಿ (ಕೊಪ್ಪಳ):ಮಹಿಳೆಗೆ ಕುಟುಂಬದಲ್ಲಿನ ತೊಂದರೆ ಹಾಗೂ ಅನಾರೋಗ್ಯದ ಸಮಸ್ಯೆ ಪರಿಹರಿಸುವುದಾಗಿ ಹೇಳಿದ ಸ್ವಾಮೀಜಿಯೊಬ್ಬ, ಪೂಜೆ ಮಾಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಾಗರ ತಾಂಡಾದಲ್ಲಿ (ಕರಿಯಮ್ಮ ಕ್ಯಾಂಪ್) ಘಟನೆ ಜರುಗಿದ್ದು, ಸಂತ್ರಸ್ತೆ ನೀಡಿದ ದೂರಿನನ್ವಯ ಪೊಲೀಸರು, ಲಾಯದುಣಿಸಿಯ ವೀರಯ್ಯ ನೀಲಯ್ಯಸ್ವಾಮಿ ದೋಟಿಹಾಳ ಹಿರೇಮಠ ಎಂಬಾತನನ್ನು ಬಂಧಿಸಿದ್ದಾರೆ.
ದೂರಿನ ವಿವರ:ಭಿಕ್ಷೆ ಬೇಡುವ ನೆಪದಲ್ಲಿ ಸಂತ್ರಸ್ತೆಯ ಮನೆಗೆ ಹೋದ ಆರೋಪಿಗೆ, ಮಹಿಳೆ ಹಾಗೂ ಆಕೆಯ ಗಂಡ 21 ರೂಪಾಯಿ ಕಾಣಿಕೆ ನೀಡಿದ್ದಾರೆ. ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಪೂಜೆ ಮೂಲಕ ಪರಿಹಾರ ಕಲ್ಪಿಸಿಕೊಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ ತನ್ನ ಬಲಗೈ ಪಕ್ಕೆ ಮತ್ತು ಕೈ ಕಾಲು ನೋಯುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆಕೆಯ ಪತಿಯನ್ನು ಹೊರಗೆ ಕರೆದೊಯ್ದ ಸ್ವಾಮಿ ಮನೆಯಲ್ಲಿ ಊದಿನಕಡ್ಡಿ ಹಚ್ಚಿಕೊಂಡು ಬರಲು ತಿಳಿಸಿದ್ದ. ಬಳಿಕ ಪೂಜೆ ಮಾಡಿ ಅಗರಬತ್ತಿಯನ್ನು ಮನೆಯ ಹೊರಗಿಡಬೇಕು. ನಾನು ಹೇಳುವವರೆಗೂ ಮನೆಯೊಳಗೆ ಬಾರದಂತೆ ಸ್ವಾಮೀಜಿ ಮಹಿಳೆಯ ಪತಿಗೆ ಸೂಚಿಸಿದ್ದಾನೆ. ನಂತರ ಮನೆಯೊಳಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ತಕ್ಷಣವೇ ಜಾಗೃತಗೊಂಡ ಮಹಿಳೆ, ಸ್ವಾಮೀಜಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.