ಕೊಪ್ಪಳ: ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರಲ್ಲಿನ ಪೋಷಕಾಂಶಗಳ ಕೊರತೆ ನೀಗಿಸಲು, ಅಪೌಷ್ಠಿಕತೆಯನ್ನು ಹೋಗಲಾಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಪೂರಕ ಪೋಷಕಾಂಶಗಳನ್ನು ಪೂರೈಸುತ್ತಿದೆ. ಕೆಲ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿದರೆ ಕೊಪ್ಪಳ ಜಿಲ್ಲೆಯಲ್ಲಿ ಈ ಕಾರ್ಯ ಸುಗಮವಾಗಿ ನಡೆಯುತ್ತಿದೆ.
ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರ ಪೈಕಿ ಹೆಚ್ಚಿನವರಲ್ಲಿ ಅಪೌಷ್ಠಿಕತೆ ಕಂಡುಬರುತ್ತದೆ. ಆ ಸಮಸ್ಯೆ ಪರಿಹರಿಸಲೆಂದೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಪೋಷಕಾಂಶಯುಕ್ತ ಆಹಾರ, ದವಸ-ಧಾನ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದೆ.
ಅಪೌಷ್ಠಿಕತೆ ಸಮಸ್ಯೆ ಹೋಗಲಾಡಿಸಲು ಸೂಕ್ತ ಕ್ರಮ ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲೊಂದಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಹಾಗೂ ಮಹಿಳೆಯರ ಪ್ರಮಾಣ ಕೊಂಚ ಜಾಸ್ತಿಯೇ ಇದೆ. ಹಾಗಾಗಿ ಪೂರಕ ಪೋಷಕಾಂಶಗಳು ಅಂಗನವಾಡಿ ಕೇಂದ್ರಗಳ ಮೂಲಕ ಅವರ ಮನೆ ಬಾಗಿಲಿಗೆ ತಲುಪುತ್ತಿವೆ. ಪೂರಕ ಪೋಷಕಾಂಶಗಳಾದ ಹಾಲು ಮತ್ತು ಮೊಟ್ಟೆಯನ್ನು ಅಂಗನವಾಡಿ ಮಕ್ಕಳಿಗೆ, ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರಿಗೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 1,850 ಅಂಗನವಾಡಿ ಕೇಂದ್ರಗಳಿವೆ. ಪ್ರತಿ ನಿತ್ಯ ಒಂದರಂತೆ ಮೊಟ್ಟೆ ಹಾಗೂ ಹಾಲಿನ ಪುಡಿ ನೀಡಲಾಗುತ್ತಿದೆ. ಕೆಎಂಎಫ್ನಿಂದ ಹಾಲಿನ ಪುಡಿಯನ್ನು ಖರೀದಿಸಿ ನೀಡಲಾಗುತ್ತಿದೆ. ಇನ್ನು ಬಾಲ ವಿಕಾಸ ಮಂಡಳಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜಾಯಿಂಟ್ ಅಕೌಂಟ್ ಮೂಲಕ ಮೊಟ್ಟೆಯನ್ನು ಖರೀದಿ ಮಾಡಲಾಗುತ್ತಿದೆ. ಈ ಪೂರಕ ಪೋಷಕಾಂಶಗಳು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗಿ, ಬಳಿಕ ಅದನ್ನು ವಿತರಿಸುವ ಕಾರ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ.
ಇಲಾಖೆಯ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಮಕ್ಕಳಿಗೆ, ಬಾಣಂತಿ, ಗರ್ಭಿಣಿಯರಿಗೆ ನೀಡಲು ಹಾಲಿನ ಪುಡಿ, ಮೊಟ್ಟೆ ಸೇರಿದಂತೆ ಇನ್ನಿತರೆ ಪೂರಕ ಪೋಷಕಾಂಶಗಳು ಸರಿಯಾಗಿ ಲಭ್ಯವಾಗುತ್ತಿವೆ. ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲ. ಇಲಾಖೆಯ ಸೂಚನೆಯಂತೆ ಅಂಗನವಾಡಿಗೆ ಬಂದ ಪೂರಕ ಪೋಷಕಾಂಶಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ.
ಇದನ್ನೂ ಓದಿ:ಅನಾಥ ಸಹೋದರಿಯರಿಗೆ ಮನೆ ನಿರ್ಮಾಣ; ಸರ್ಕಾರಿ ಅಧಿಕಾರಿಗಳ ಮಾನವೀಯತೆ
ಈ ಹಿಂದೆ ಮೊಟ್ಟೆ ಖರೀದಿಸಿದ ಹಣವನ್ನು ನೀಡರಲಿಲ್ಲ, ಇದರಿಂದ ಒಂದಿಷ್ಟು ಸಮಸ್ಯೆಯಾಗಿತ್ತು. ಆದರೆ ಈಗ ಅಂತಹ ಸಮಸ್ಯೆ ಇಲ್ಲ. ಒಂದು ಮೊಟ್ಟೆಗೆ ಐದು ರೂಪಾಯಿಯಂತೆ ಅದನ್ನು ಖರೀದಿಸಲು ಇಲಾಖೆ ಹಣ ನೀಡುತ್ತಿದೆ. ಇದೀಗ ಮೊಟ್ಟೆಗಳ ದರ ಏರಿಕೆಯಾಗಿದೆ. ಹೀಗಾಗಿ ದರದಲ್ಲಿ ಆಗಿರುವ ವ್ಯತ್ಯಾಸಕ್ಕೆ ಅನುಗುಣವಾಗಿ ಇಲಾಖೆ ಹಣ ಪಾವತಿಸಬೇಕು ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು.