ಗಂಗಾವತಿ (ಕೊಪ್ಪಳ):ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನವೇ ಕೊಪ್ಪಳ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಯ 3 ಲಕ್ಷ 760 ಮಕ್ಕಳಿಗೆ ಪಠ್ಯ, ಸಮವಸ್ತ್ರ ವಿತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಂ.ರೆಡ್ಡಿ ರೆಡ್ಡೇರ್ ಹೇಳಿದರು. ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಅನುದಾನಿತ ಶಾಲೆಗಳಿಗೆ ಪೂರೈಕೆಯಾದ ಪಠ್ಯ ಪುಸ್ತಕ ಮತ್ತು ಸಮವಸ್ತ್ರಗಳ ಪರಿಶೀಲನೆಗೆ ಅವರು ಆಗಮಿಸಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಎಲ್ಲ ಶಾಲೆಯ ಮಕ್ಕಳಿಗೆ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ನೀಡಲಾಗಿದೆ. ಎಲ್ಲ ವಿಷಯಗಳ ಪಠ್ಯಗಳನ್ನು ಈಗಾಗಲೇ ಆಯಾ ಶಾಲೆಗಳಿಗೆ ತಲುಪಿಸಲಾಗಿದೆ. ಇದೇ ತಿಂಗಳ ಕೊನೆಯಲ್ಲಿ ಆಯಾ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಿದ್ದಾರೆ. ಮೊದಲ ಹಂತದಲ್ಲಿ ಒಂದು ಜತೆ ಶಾಲಾ ಸಮವಸ್ತ್ರ ನೀಡಲಾಗಿದೆ. ಜುಲೈ ಕೊನೆಯ ವಾರ ಅಥವಾ ಆಗಸ್ಟ್ನಲ್ಲಿ ಮತ್ತೊಂದು ಜೊತೆ ಸಮವಸ್ತ್ರ ರವಾನೆಯಾಗುವ ಸಾಧ್ಯತೆ ಇದೆ ಎಂದರು.
ಅನುದಾನರಹಿತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 40 ಸಾವಿರ ಮಕ್ಕಳಿಗೆ ಸಂಬಂಧಿಸಿದಂತೆ ಈಗಾಗಲೇ ಆಯಾ ಶಾಲೆಯ ಆಡಳಿತ ಮಂಡಳಿಗಳು ಶೇ.10ರಷ್ಟು ಮುಂಗಡ ಪಾವತಿಸಿ ಪಠ್ಯ ಪುಸ್ತಕಕ್ಕೆ ಬೇಡಿಕೆ ಸಲ್ಲಿಸಿದ್ದು, ಬಾಕಿ ಶೇ. 90ರಷ್ಟು ಹಣ ಪಾವತಿಸಿ ಪಠ್ಯ ಪುಸ್ತಕ ಒಯ್ಯಬಹುದು. ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 2.60 ಲಕ್ಷ ಮಕ್ಕಳಿಗೆ ಉಚಿತ ಪಠ್ಯ, ಸಮವಸ್ತ್ರ ನೀಡಲಾಗುತ್ತಿದೆ. ಆರ್ಟಿಇ ಯೋಜನೆಯಡಿ ಓದುತ್ತಿರುವ ಜಿಲ್ಲೆಯ ಏಳು ಸಾವಿರ ಮಕ್ಕಳಿಗೆ ಉಚಿತ ಪಠ್ಯ ಒದಗಿಸಿ ಕೊಡಲಾಗುವುದು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿಯ ಮಕ್ಕಳ ಸಂಖ್ಯೆ 2.19 ಲಕ್ಷವಿದ್ದು ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಬಿಇಒ ಸೋಮಶೇಖರ ಗೌಡ, ತಹಶೀಲ್ದಾರ್ ಮಂಜುನಾಥ ಹಿರೇಮಠ ಭೋಗಾವತಿ ಉಪಸ್ಥಿತರಿದ್ದರು.