ಕೋಲಾರ:ಅವು ಈಗಿನ್ನೂ ಹೊಸ ಪ್ರಪಂಚಕ್ಕೆ ಕಾಲಿಟ್ಟಿರುವ ನವಜಾತ ಶಿಶು, ಪುಟ್ಟ ಪುಟ್ಟ ಮಕ್ಕಳು. ಆಡುತ್ತಾ ನಲಿಯುತ್ತಾ ಇರಬೇಕಾದ ಪುಟ್ಟ ಕಂದಮ್ಮಗಳು. ಆದರೆ ಕೊರೊನಾ ಅನ್ನೋ ಮಹಾಮಾರಿ ರುದ್ರ ನರ್ತನಕ್ಕೆ ಇಲ್ಲಿ 15 ಕ್ಕೂ ಹೆಚ್ಚು ಮಕ್ಕಳು ಸಿಲುಕಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಮಹಿಳೆಯರು, ಮಕ್ಕಳು, ಗರ್ಭಿಣಿಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಗರ್ಭಿಣಿ ಮಹಿಳೆಯರಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿ ಆತಂಕ ಸೃಷ್ಟಿಸುತ್ತಿದ್ದು, ವೈರಸ್ ಈಗ ಬಾಣಂತಿಯರಲ್ಲೂ ಕಾಣಿಸಿಕೊಳ್ಳುವ ಮೂಲಕ ಹುಟ್ಟುತ್ತ ಅಮ್ಮನ ಮಡಿಲಲ್ಲಿ ಮಲಗಿ ಆಡಿಕೊಂಡು, ಎದೆಹಾಲು ಕುಡಿಯಬೇಕಿದ್ದ ಮಕ್ಕಳನ್ನು ದೂರ ಮಾಡಿದೆ.
ಹೌದು.. ಕೋಲಾರ ಜಿಲ್ಲೆಯಲ್ಲಿ ಮೂವರು ಬಾಣಂತಿಯರಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಬಾಣಂತಿಯರು ಹಾಗೂ ಆ ನವಜಾತ ಮಕ್ಕಳನ್ನು ಹೆಚ್ಚಿನ ಕಾಳಜಿ ವಹಿಸಿ ಆರೈಕೆ ಮಾಡಲಾಗುತ್ತಿದೆ. ಮಕ್ಕಳಿಗೆ ತಾಯಿ ಎದೆಹಾಲು ಕುಡಿಸುವಾಗ ಮಾತ್ರ ತಾಯಿಯ ಜೊತೆಗೆ ಮಕ್ಕಳನ್ನು ಇರಿಸಲಾಗುತ್ತಿದೆ. ಉಳಿದಂತೆ ಮಕ್ಕಳನ್ನು ಪ್ರತ್ಯೇಕವಾಗಿಟ್ಟು ಆರೈಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.