ಕೋಲಾರ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದು ಇಂದು ಬೋನಿಗೆ ಬಿದ್ದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿ ಗ್ರಾಮದ ಬಳಿ ಜರುಗಿದೆ.
ಕೊನೆಗೂ ಬೋನಿಗೆ ಬಿತ್ತು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
ಸದ್ಯ ಬೋನಿನಲ್ಲಿ ಬಂಧಿಯಾಗಿರುವ ಚಿರತೆ ಎರಡು ದಿನಗಳ ಹಿಂದೆ ಎರಡು ಕುರಿಗಳನ್ನ ಕೊಂದು ತಿಂದಿತ್ತು. ಹೀಗೆ ಗ್ರಾಮದ ಜನರಿಗೆ ತಲೆನೋವಾಗಿದ್ದ ಚಿರತೆ ಸದ್ಯ ಗ್ರಾಮದ ಸಮೀಪ ಇರುವ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ.
ಅಷ್ಟೇ ಅಲ್ಲದೆ ಇದರೊಂದಿಗೆ ಇನ್ನೂ ಎರಡು ಚಿರತೆಗಳು ಉಳ್ಳೇರಹಳ್ಳಿ ಗ್ರಾಮದ ಬೆಟ್ಟದಲ್ಲಿರುವ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬೆಟ್ಟದಲ್ಲಿರುವ ಚಿರತೆಗಳನ್ನ ಹಿಡಿದು ಬೇರೆಡೆಗೆ ಬಿಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಚಿರತೆಯನ್ನ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ.