ಪ್ರಕರಣದ ಬಗ್ಗೆ ಪ್ರಭಾರ ಎಸ್ಪಿ ಹೇಳಿಕೆ ಕೋಲಾರ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಹತ್ಯೆ ಮಾಡಿರುವ ಘಟನೆ ಇಲ್ಲಿಯ ಷಾಹಿದ್ ನಗರದಲ್ಲಿ ತಡರಾತ್ರಿ ನಡೆದಿದೆ. ಬಾಬು ಷರಿಫ್ ಕೊಲೆಯಾದ ವ್ಯಕ್ತಿ. ತಬರೇಜ್ ಹತ್ಯೆ ಮಾಡಿದ ಅಳಿಯ.
ಘಟನೆಯ ಸಂಪೂರ್ಣ ವಿವರ: ಕೆಲ ದಿನಗಳ ಹಿಂದೆ ಅಂದರೆ, 06-07-23ರಂದು ಬಾಬು ಷರೀಫ್ ಅವರು ತಮ್ಮ ಮಗಳು ಸಾನಿಯಾ ಖಾನಂರನ್ನು ನಿಸಾರ್ ಪಾಷಾ ಎಂಬವರ ಮಗ ತಬರೇಜ್ ಪಾಷಾರಿಗೆ ಕೊಟ್ಟು ಮದುವೆ ಮಾಡಿದ್ದರು. ಮದುವೆಯಾದ ಎರಡೇ ದಿನಕ್ಕೆ ತಬರೇಜ್ ತನ್ನ ಪತ್ನಿ ಸಾನಿಯಾ ಖಾನಂಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದನ್ನು ಸಹಿಸಿಕೊಳ್ಳಲಾಗದೆ ಆಗಸ್ಟ್ 11ರಂದು ಸಾನಿಯಾ ತವರು ಮನೆಗೆ ವಾಪಸ್ ಬಂದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ತಬರೇಜ್, ಹೆಂಡತಿಗೆ ಮೆಸೇಜ್ ಮಾಡಿ ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಎಂದೆಲ್ಲ ಧಮ್ಕಿ ಹಾಕಿದ್ದಾನಂತೆ. ಕಳೆದ ರಾತ್ರಿಯೂ ಮೆಸೇಜ್ ಮಾಡಿ ಬೆದರಿಕೆ ಹಾಕಿದ್ದಾನೆ.
ವಿಷಯ ತಿಳಿದ ಸಾನಿಯಾ ತಂದೆ ಬಾಬು ಷರೀಫ್, ವಿಚಾರಿಸಲು ಅಳಿಯನ ಮೆನಗೆ ಹೋಗಿದ್ದಾರೆ. ಈ ವೇಳೆ ತಬರೇಜ್ ಪಾಷಾ ಹಾಗೂ ಆತನ ತಾಯಿ ಜಬೀನಾ ತಾಜ್, ಷರೀಫ್ಗೆ ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಷರೀಫ್ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಕೋಲಾರ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ತಬರೇಜ್ ಪಾಷಾ ತಲೆಮರೆಸಿಕೊಂಡಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಹೆದ್ದಾರಿ ಬಳಿ ಅವಿತುಕೊಂಡಿದ್ದ ಆರೋಪಿ ಹಾಗೂ ಜಬೀನಾ ತಾಜ್ ಇಬ್ಬರನ್ನೂ ಬಂಧಿಸಿದ್ದಾರೆ.
ಘಟನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮೃತ ಷರೀಫ್ ಮಗಳು ಸಾನಿಯಾ ಖಾನಂ, ನಿನ್ನೆ ಸಂಜೆ ತಬರೇಜ್ ನನಗೆ ಕಾಲ್ ಮಾಡಿ ಧಮ್ಕಿ ಹಾಕಿದ್ದಾನೆ. ನಿಮ್ಮ ಕುಟುಂಬದಿಂದ ನನಗೆ ತೊಂದರೆಯಾಗುತ್ತಿದೆ. ನಿನ್ನ ತಂದೆಯನ್ನು ಸಾಯಿಸುವುದಾಗಿ ಬೆದರಿಕೆವೊಡ್ಡಿದ್ದಾನೆ. ಈ ಬಗ್ಗೆ ನನ್ನ ತಂದೆ ವಿಚಾರಣೆ ಮಾಡಲು ರಾತ್ರಿ ಆತನ ಮನೆಗೆ ಹೋದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದಕ್ಕೂ ಮೊದಲು ನನಗೂ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಹಚ್ಚಿ ಸಾಯಿಸುವುದಾಗಿ ಮತ್ತು ಚಾಕುವಿನಿಂದ ಇರಿಯುವುದಾಗಿ ಹೆದರಿಸುತ್ತಿದ್ದ. ಅಲ್ಲದೇ ಎರಡು ಬಾರಿ ಚಾಕುವನ್ನು ತೋರಿಸಿದ್ದ ಎಂದು ಸಾನಿಯಾ ಖಾನಂ ಹೇಳಿದ್ದಾರೆ.
ಜಿಲ್ಲಾ ಪ್ರಭಾರ ಎಸ್ಪಿ ಶಾಂತಾರಾಜು ಹೇಳಿಕೆ: "ಬಾಬು ಷರೀಫ್ ಅವರು ತಮ್ಮ ಮಗಳು ಮತ್ತು ಅಳಿಯನ ನಡುವಿನ ಮನಸ್ತಾಪದ ಬಗ್ಗೆ ವಿಚಾರ ಮಾಡಲು ನಿನ್ನೆ ರಾತ್ರಿ ಹೋಗಿದ್ದಾರೆ. ಈ ವೇಳೆ ಅಳಿಯ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಕೋಲಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮಾಡಲಾಗುತ್ತಿದೆ" ಎಂದರು.
ಇದನ್ನೂ ಓದಿ:ಆಹ್ವಾನ ಪತ್ರ ಕೊಡುವ ನೆಪದಲ್ಲಿ ಬಂದ ಅಪರಿಚಿತರು: ದಂಪತಿಗೆ ಚಾಕುವಿನಿಂದ ಇರಿದು ಪರಾರಿ