ಕೋಲಾರ:ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಸಲು ಪಿಯು ಪರೀಕ್ಷಾ ಮಂಡಳಿ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಕೋಲಾರದಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ನಗರಸಭೆ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಸೋಂಕು ನಿವಾರಕವನ್ನು ಸಿಂಪಡಣೆ ಮಾಡಲಾಗಿದೆ.
ಜೊತೆಗೆ ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್ ಹಾಕಲಾಗಿದೆ. ಜಿಲ್ಲೆಯಲ್ಲಿ ಒಟ್ಟು 26 ಪರೀಕ್ಷಾ ಕೇಂದ್ರಗಳಿದ್ದು, ಜಿಲ್ಲೆಯಲ್ಲಿ ಒಟ್ಟು 16,959 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪರೀಕ್ಷೆಗಾಗಿ ಒಟ್ಟು 920 ಸಿಬ್ಬಂದಿಯನ್ನ ನೇಮಕ ಮಾಡಲಾಗಿದೆ.
ಪ್ರತಿ ಕೇಂದ್ರದಲ್ಲೂ 200 ಜನಕ್ಕೆ ಒಂದರಂತೆ ಥರ್ಮಲ್ ಸ್ಕ್ಯಾನರ್ ಇಡಲಾಗಿದೆ. ಜೊತೆಗೆ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ಸಿದ್ದವಾಗಿಟ್ಟುಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲೂ ಸಾಮಾಜಿಕ ಅಂತರ ಬಾಕ್ಸ್ಗಳನ್ನು ಹಾಕಲಾಗುತ್ತಿದೆ.
ಪರೀಕ್ಷೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಒಂದು ನೀರಿನ ಬಾಟಲ್ನೊಂದಿಗೆ ಮಾಸ್ಕ್ ಕಡ್ಡಾಯವಾಗಿ ತರಬೇಕೆಂದು ಈಗಾಗಲೇ ಕಾಲೇಜುಗಳ ವತಿಯಿಂದ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಿದ್ದು, ಪ್ರತಿ ಕೇಂದ್ರದಲ್ಲೂ ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನ ಬಳಕೆ ಮಾಡಲಾಗುತ್ತದೆ.
ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದ್ದು, ಹೊರ ರಾಜ್ಯಗಳ 66 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.