ಕೋಲಾರ: ಸುರ್ಜೇವಾಲಾ ಅವರು ಯಾವ ಇಲಾಖೆಯಿಂದ ಎಷ್ಟು ಹಣ ಬರಬೇಕು ಎಂಬುದರ ಕುರಿತು ಸಭೆ ನಡೆಸಿದ್ದಾರೆ ಎಂದು ಸಂಸದ ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ಬಿಜೆಪಿಯವರನ್ನು ದೆಹಲಿಯ ಎಟಿಎಂ ಎಂದು ಆರೋಪಿಸುತ್ತಿದ್ದರು. ಇದೀಗ ಸುರ್ಜೇವಾಲಾ ಅವರು ರಾಜ್ಯದಲ್ಲಿ ಅಧಿಕಾರಿಗಳ ಸಭೆ ಮಾಡುವ ಮೂಲಕ ದೆಹಲಿಯ ಎಟಿಎಂ ಮಾಡಿಕೊಂಡಿದ್ದಾರೆ ಟೀಕಿಸಿದರು.
ನಮ್ಮ ನಾಯಕರು ಯಾರೂ ಬಿಜೆಪಿ ಸರ್ಕಾರ ಇದ್ದಾಗ ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ. ಆದರೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆಶಿಯವರು, ಜಮೀರ್ ಅಹಮದ್ ಹಾಗೂ ಜಾರ್ಜ್ ಸೇರಿ ಸುರ್ಜೆವಾಲಾ ಸಭೆ ನಡೆಸಿದ್ದಾರೆ. ಈ ಮೂಲಕ ಯಾವ ಇಲಾಖೆಯಿಂದ ಎಷ್ಟು ಹಣ ಬರಬೇಕು ಎಂದು ಸಭೆ ನಡೆಸಿ ತೀರ್ಮಾನಿಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ನವರಿಗೆ ನಾಚಿಕೆ ಆಗಬೇಕು, ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಎಂದು ಆರೋಪಿಸುತ್ತಿದ್ದರು. ಇದೀಗ ಕಾಂಗ್ರೆಸ್ನವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸುರ್ಜೇವಾಲಾ ಅವರು ನಮ್ಮ ರಾಜ್ಯದ ಅಧಿಕಾರಿಗಳ ಜೊತೆ ಸಭೆ ನಡೆಸುವುದರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆ ಜೆ ಜಾರ್ಜ್, ಜಮೀರ್ ಅಹಮದ್ ಇವರೆಲ್ಲ ಕರ್ನಾಟಕದ ಜನರ ಕ್ಷಮೆ ಕೇಳಬೇಕು. ಇದು ಪುನರಾವರ್ತನೆಯಾದರೆ ಉಗ್ರ ಹೋರಾಟ ಮಾಡುತ್ತೇವೆ. ಜೊತೆಗೆ ಕೋಲಾರದಿಂದ ರಾಜಭವನ ಚಲೋ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುರ್ಜೆವಾಲಾ ಅಧಿಕಾರಿಗಳ ಜೊತೆ ಸಭೆ.. ಡಿ.ಎಸ್. ಅರುಣ್ ಖಂಡನೆ: ಎಐಸಿಸಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದನ್ನು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಖಂಡಿಸಿದ್ದಾರೆ. ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿಯಲು ರಾಜ್ಯದ ಜನರು ತೀರ್ಪು ನೀಡಿದ್ದಾರೆ. ಯಾವುದೇ ಪಕ್ಷದ ಸರ್ಕಾರ ಆಡಳಿತ ನಡೆಸಬೇಕಾದರೆ ಸರ್ಕಾರದ ತೀರ್ಮಾನಗಳನ್ನು, ನೀತಿಗಳನ್ನು ಆಡಳಿತರೂಢ ಪಕ್ಷದ ಪ್ರಜಾಪ್ರತಿನಿಧಿಗಳು ತೆಗೆದುಕೊಳ್ಳಬೇಕು. ಇದೇ ಸಂವಿಧಾನದ ಆಶಯ. ಇದರ ಉದ್ದೇಶ ಸರ್ಕಾರದ ತೀರ್ಮಾನಗಳು ಜನಹಿತವಾಗಿರಬೇಕೆಂಬುದಾಗಿದೆ.