ಕೋಲಾರ:ಲೋಕಸಭಾ ಚುನಾವಣೆ ಕಾವು ಎಲ್ಲೆಡೆ ತಾರಕಕ್ಕೇರಿದೆ. ಈ ನಡುವೆ ಬಂದಿರುವ ಯುಗಾದಿ ಹಬ್ಬ ಅಭ್ಯರ್ಥಿಗಳಿಗೆ ಬೋನಸ್ ಸಿಕ್ಕಂತಾಗಿದೆ. ಮತದಾರರ ಮನಸೆಳೆಯಲು ಅಭ್ಯರ್ಥಿಗಳು ವರ್ಷ ತೊಡಕಿಗೆ ಚಿಕನ್, ಮಟನ್ ಕೊಟ್ಟಾದ್ರೂ ವೋಟು ಹಾಕಿಸಿಕೊಳ್ಳೋ ಪ್ಲಾನ್ನಲ್ಲಿದ್ದಾರೆ.
ಮತದಾರರ ಮನಸೆಳೆಯಲು ಅಭ್ಯರ್ಥಿಗಳ ನ್ಯೂ ಪ್ಲಾನ್ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರೋಜರನಹಳ್ಳಿ ಸಂತೆಯಲ್ಲಿ ಸೇರಿರುವ ಜನ ಇಂದು ಯುಗಾದಿ ಹಬ್ಬದ ವರ್ಷ ತೊಡಕಿಗೆ ಕುರಿ, ಮೇಕೆಗಳ ವ್ಯಾಪಾರ ಜೋರಾಗಿಯೇ ನಡೆದಿದೆ. ಲೋಕಸಭಾ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಇನ್ನಷ್ಟು ವ್ಯಾಪಾರ ಜೋರಾಗಲಿದೆ.
ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಳ್ಳಿಗಳಲ್ಲಿ ಮತದಾರರಿಗೆ ವರ್ಷ ತೊಡಕಿಗೆ ಮಟನ್ ಹಂಚಲು ನೀತಿ ಸಂಹಿತೆ ಅಡ್ಡಿಬರುತ್ತೆ. ಆ ಕಾರಣದಿಂದ ಸ್ಥಳೀಯ ಮುಖಂಡರ ಮೂಲಕ ಊರಿಗೆ ಎರಡ್ಮೂರರಂತೆ ಕುರಿ, ಮೇಕೆಗಳನ್ನು ಖರೀದಿಸಿ ಹಂಚಲು ಪ್ಲಾನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತೆಯಲ್ಲಿ ಕುರಿ, ಮೇಕೆಗಳ ಬೇಡಿಕೆ ಹೆಚ್ಚಾಗಿದ್ದು, ಸಾಮಾನ್ಯ ಜನರು ಕುರಿ, ಮೇಕೆಗಳನ್ನು ಖರೀದಿ ಮಾಡಲು ಸಾಧ್ಯವಾಗದಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿದೆ. ಹಾಗಾಗಿ ಯುಗಾದಿ ಹಬ್ಬಕ್ಕೂ ಚುನಾವಣೆ ಕರಿನೆರಳು ಬಿದ್ದಿದೆ ಅಂತಿದ್ದಾರೆ ಸ್ಥಳೀಯರು.
ಈ ಬಾರಿಯ ಹಬ್ಬದ ವೇಳೆಯಲ್ಲಿ ಚುನಾವಣೆ ಬಂದಿದ್ದು ಕೆಲವೊಂದು ಅಭ್ಯರ್ಥಿಗಳ ಬೆಂಬಲಿಗರು ಒಟ್ಟೊಟ್ಟಿಗೆ ನೂರು-ಇನ್ನೂರು ಕುರಿಗಳನ್ನು ಖರೀದಿ ಮಾಡುತ್ತಿದ್ದಾರೆ. ಹಾಗಾಗಿಯೇ, ಕಳೆದ ವರ್ಷಕ್ಕೆ ಹೋಲಿಸಿದರೆ 350 ರಿಂದ 400 ರೂಪಾಯಿ ಇದ್ದ ಮಟನ್ ಬೆಲೆ ಈಗ 450 ರೂಪಾಯಿಗೇರಿದೆ.