ಕೋಲಾರ:ಜಮೀನು ವಿವಾದ ಹಿನ್ನೆಲೆ ಫಸಲಿಗೆ ಬಂದಿದ್ದ ಸೀಬೆ ಗಿಡಗಳನ್ನ ಕಡಿದು ಹಾಕಿರುವ ಘಟನೆ ಕೋಲಾರದಲ್ಲಿ ಜರುಗಿದೆ. ತಾಲೂಕಿನ ವೇಮಗಲ್ ಹೋಬಳಿಯ ಕರೇನಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದ್ದು, ಫಸಲಿಗೆ ಬಂದಿದ್ದ ನೂರಾರು ಸೀಬೆ ಗಿಡಗಳು ನೆಲಸಮವಾಗಿವೆ.
ಇದು ಕರೇನಹಳ್ಳಿ ಗ್ರಾಮದ ಪದ್ಮಾವತಿ ಎಂಬುವವರಿಗೆ ಸೇರಿದ ಸೀಬೆ ಗಿಡಗಳಾಗಿದ್ದು, ರಾತ್ರೋರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.
ಸೀಬೆ ಗಿಡಗಳನ್ನ ಕಡಿದು ಹಾಕಿದ ದುಷ್ಕರ್ಮಿಗಳು ಕೃಷ್ಣಮೂರ್ತಿ ಎಂಬುವವರು ಗೋಮಾಳ ಜಮೀನಿನಲ್ಲಿ ಕಳೆದ ಹತ್ತು ವರ್ಷಗಳಿಂದ ಸೀಬೆ ಬೆಳೆಯುತ್ತಿದ್ದು, ಜಮೀನು ಮಂಜೂರಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಅದೇ ಗ್ರಾಮದ ಚೇತನ್ ಹಾಗೂ ಅವರ ಕುಟುಂಬಸ್ಥರು, ಕೃಷ್ಣಮೂರ್ತಿ ಅವರ ಅನುಭೋಗದಲ್ಲಿದ್ದ ಗೋಮಾಳ ಜಮೀನಿಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿ, ಜಮೀನು ಕಬಳಿಸಲು ಯತ್ನಿಸಿದ್ದಾರೆ ಎಂದು ಕೃಷ್ಣಮೂರ್ತಿ ಕುಟುಂಬಸ್ಥರು ಅರೋಪಿಸಿದ್ದಾರೆ.
ಈ ಹಿನ್ನೆಲೆ ಕಳೆದ ರಾತ್ರಿ ಏಕಾಏಕಿ ತೋಟಕ್ಕೆ ದಾಳಿ ಮಾಡಿರುವ ಚೇತನ್, ಮುನಿರಾಜು, ಮುನಿನಾರಾಯಣಪ್ಪ, ಫಸಲಿಗೆ ಬಂದಿದ್ದ ಸೀಬೆ ಮರಗಳನ್ನ ಕಡಿದು ಹಾಕಿ ತೋಟಕ್ಕೆ ಹಾಕಲಾಗಿದ್ದ ಕಲ್ಲು ಕಾಂಪೌಂಡನ್ನೂ ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.