ಕೋಲಾರ : ನಗರದ ಜಿಲ್ಲಾಸ್ಪತ್ರೆ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ವಿಭಿನ್ನವಾಗಿ ಜನಪ್ರತಿನಿಧಿಗಳ ಮುಖವಾಡ ಧರಿಸಿ ಅಣಕು ಹಾಗೂ ವ್ಯಂಗ್ಯ ಪ್ರತಿಭಟನೆ ನಡೆಸಿದರು.
ಕೋಟ್ಯಂತರ ರೂಪಾಯಿ ವೆಚ್ಚದ ಆಸ್ಪತ್ರೆಯನ್ನ ಕಳೆದ 6 ತಿಂಗಳಿನಿಂದ ಉದ್ಘಾಟನೆಗೆ ಮಾಡದೆ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆ ಎದುರು ನಾದಸ್ವರ, ಡೋಲು ಮೇಳ, ದನಗಳ ಸಮೇತ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿ ಸರ್ಕಾರವನ್ನ ಎಚ್ಚರಿಸಿದರು.
ರೈತ ಸಂಘದಿಂದ ವಿನೂತನ ಪ್ರತಿಭಟನೆ.. ಆರೋಗ್ಯ ಸಚಿವ ಶ್ರೀರಾಮುಲು ಅವರು ಆಸ್ಪತ್ರೆ ಉದ್ಘಾಟನೆ ಮಾಡದೆ ಡಿಸಿಎಂ ಪಟ್ಟಕ್ಕಾಗಿ ಲಾಬಿ ಮಾಡುತ್ತಿರುವ ವ್ಯಂಗ್ಯ ಚಿತ್ರಗಳನ್ನ ಪ್ರದರ್ಶಿಸಲಾಯಿತು. ಅಲ್ಲದೆ ಎಣ್ಣೆ ಕುಡಿಯಿರಿ ಯಮಲೋಕಕ್ಕೆ ನಡೆಯಿರಿ ಎಂದು ಅಬಕಾರಿ ಸಚಿವ ನಾಗೇಶ್‌ರ ವ್ಯಂಗ್ಯ ಚಿತ್ರ ಪ್ರದರ್ಶನ ಮಾಡುವ ಮೂಲಕ ಪ್ರತಿಭಟಿಸಿದರು.
ಜೊತೆಗೆ ಜಿಲ್ಲೆಯ ಸಂಸದ ಮುನಿಸ್ವಾಮಿ, ಶಾಸಕರಾದ ರಮೇಶ್ ಕುಮಾರ್, ಶ್ರೀನಿವಾಸಗೌಡ, ಎಸ್ ಎನ್ ನಾರಾಯಣಸ್ವಾಮಿ, ಕೆ ವೈ ನಂಜೇಗೌಡ, ರೂಪ ಅವರುಗಳ ಮುಖವಾಡ ಹಾಕಿ ಪ್ರತಿಭಟನೆ ಮಾಡಿ ಟೇಪ್ ಕತ್ತರಿಸುವ ಮೂಲಕ ಆಸ್ಪತ್ರೆ ಉದ್ಘಾಟನೆ ಮಾಡಿದರು.
ಫೆಬ್ರವರಿ 8ರಂದು ಆಸ್ಪತ್ರೆ ಉದ್ಘಾಟನೆಗೆ ಸಿದ್ಧತೆ ನಡೆದಿದೆ. ಆಸ್ಪತ್ರೆ ಸರ್ಜನ್ ನಾರಾಯಣಸ್ವಾಮಿಯವರಿಗೆ ಮನವಿ ನೀಡುವ ಮೂಲಕ ಆದಷ್ಟು ಬೇಗ ಉದ್ಘಾಟನೆ ಮಾಡುವಂತೆ ಮನವಿ ಮಾಡಿದರು.