ಕೋಲಾರ:ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಈ ಅಟ್ಟಹಾಸಕ್ಕೆ ದೆಹಲಿಯಲ್ಲಿ ವಾಸವಾಗಿದ್ದ ಕುಟುಂಬವೊಂದರಲ್ಲಿ ಸ್ಮಶಾನ ಮೌನ ಆವರಿಸಿದೆ. ಇಡೀ ಕುಟುಂಬವೊಂದು ಕೊರೊನಾಘಾತಕ್ಕೆ ನಲುಗಿಹೋಗಿದೆ.
ಕೆಜಿಎಫ್ ತಾಲ್ಲೂಕು ತೂಕಲ್ಲು ಗ್ರಾಮದಿಂದ ಹೋಗಿ ದೆಹಲಿಯಲ್ಲಿ ವಾಸವಿದ್ದ ಮಹಿಳೆ ಬಹಳ ವರ್ಷಗಳ ನಂತರ ತಮ್ಮೂರಿನಲ್ಲಿ ತಮ್ಮ ಸಂಬಂಧಿಕರೊಬ್ಬರ ಮದುವೆಗೆಂದು ಇದೇ ಜೂನ್ 14 ರಂದು ತೂಕಲ್ಲು ಗ್ರಾಮಕ್ಕೆ ಬಂದಿದ್ದರು. ಜೂನ್ 15ರಂದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಕೊರೊನಾ ದೃಢಪಟ್ಟಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಜೂನ್ 26 ರಂದು ಮೃತಪಟ್ಟಿದ್ದಾರೆ.
ಕೋಲಾರದಲ್ಲೊಂದು 'ಕೊರೊನಾ'ಜನಕ ಕಥಾನಕ ಇಷ್ಟೊತ್ತಿಗಾಗಲೇ ಮಹಿಳೆಯ 48 ವರ್ಷದ ಪತಿ, 16 ವರ್ಷದ ಮಗ ಸೇರಿ ಎಲ್ಲರನ್ನೂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಈ ವೇಳೆ ಮೃತ ಮಹಿಳೆಯ ಪತಿಗೂ ಕೂಡಾ ಕೋವಿಡ್ ಪಾಸಿಟಿವ್ ಬಂದಿತ್ತು. ಪರಿಣಾಮ, ಮೃತ ಮಹಿಳೆಯ ಅಂತ್ಯಸಂಸ್ಕಾರ ದೊಡ್ಡ ಸಮಸ್ಯೆಯಾಯ್ತು. ತನ್ನ ಹುಟ್ಟೂರಿನ ಜನರು ಊರಿನಲ್ಲಿ ಆಕೆಯ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಚಾರಿಣಿ ಹಾಗೂ ನಗರಸಭೆ ಸಿಬ್ಬಂದಿ ಕೋಲಾರದ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ.
ಪತಿ ಸೇರಿ ಯಾರೊಬ್ಬರೂ ಆಕೆಯ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಸಿಗಲಿಲ್ಲ. ಇನ್ನು ಕೊರೊನಾ ದಿಗ್ಬಂಧನದಲ್ಲಿರುವ ಮೃತ ಮಹಿಳೆಯ 16 ವರ್ಷದ ಬಾಲಕನಿಗೆ ತನ್ನ ತಾಯಿ ಮೃತಪಟ್ಟಿರುವ ವಿಷಯವೇ ಗೊತ್ತಿಲ್ಲ. ಪ್ರತಿದಿನ ಆತ ನನ್ನ ತಾಯಿಯನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚುತ್ತಿದ್ದಾನೆ. ಈ ವಿಷಯ ತಿಳಿದರೆ ಎಲ್ಲಿ ಆತ ಆಘಾತಕ್ಕೊಳಗಾಗುತ್ತಾನೋ ಅನ್ನೋ ಭಯದಲ್ಲಿ ವಿಷಯ ತಿಳಿಸಿಲ್ಲ. ಕುಟುಂಬದ ಎಲ್ಲರೂ ಕಂಗೆಟ್ಟು ಹೋಗಿದ್ದು ಮನೆಯಲ್ಲಿ ಹಾಗೂ ಎಲ್ಲರ ಹೃದಯದಲ್ಲೂ ಸ್ಮಶಾನ ಮೌನ ಆವರಿಸಿದೆ!.
ಕೊರೊನಾ ಜೊತೆ ಬದುಕಲು ಅಣಿಯಾಗುತ್ತಿರುವಾಗಲೇ ಕೊರೊನಾ ಬದುಕನ್ನೇ ಮುಗಿಸುತ್ತಿದೆ.