ಕೋಲಾರ:ಇಂದು ಕೂಡಾ ಬಾರ್ಗೆ ಕನ್ನ ಹಾಕಿರುವ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲೆಯ ಮಾಲೂರು ತಾಲೂಕಿನ ಕರಿನಾಯಕನಹಳ್ಳಿ ಗ್ರಾಮದ ಬಳಿ ಇರುವ ಭಾರತೀ ಬಾರ್ ನಲ್ಲಿ ಕಳ್ಳತನವಾಗಿದೆ. ಕಳೆದ ರಾತ್ರಿ ಬಾರ್ ನ ಹಿಂಬದಿ ಗೋಡೆಗೆ ಕನ್ನ ಹಾಕಿರುವ ಕಳ್ಳರು, ಬಾರ್ ನಲ್ಲಿ ಇರಿಸಿದ್ದ ಸುಮಾರು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನ ಕದ್ದು ಪರಾರಿಯಾಗಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಇನ್ಸ್ಪೆಕ್ಟರ್ ವೇಣುಗೋಪಾಲ್ ಹಾಗೂ ಮಾಲೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಳೆದ ಒಂದು ವಾರದಲ್ಲಿ ಬಂಗಾರಪೇಟೆಯ ಸೂಲಿಕುಂಟೆ ಎಂ.ಎಸ್.ಐ.ಎಲ್ ಬಾರ್, ಶ್ರೀನಿವಾಸಪುರದ ರೋಜೇನಹಳ್ಳಿ ಬಳಿಯ ಬಾರ್ ಸೇರಿದಂತೆ ಮೂರನೇ ಪ್ರಕರಣ ಇದಾಗಿದ್ದು, ಬಾರ್ ಗಳ ಶೆಲ್ಟರ್ ಹಾಗೂ ಗೋಡೆಗಳಿಗೆ ಕನ್ನ ಹಾಕುತ್ತಿರುವ ಕಳ್ಳರು ಮದ್ಯವನ್ನ ದೋಚಿ ಪರಾರಿಯಾಗುತ್ತಿದ್ದಾರೆ. ಇನ್ನು ಮೂರು ಪ್ರಕರಣಗಳಲ್ಲಿ ವಿಶೇಷತೆ ಅಂದ್ರೆ ಬಾರ್ನಲ್ಲಿದ್ದ ಮದ್ಯವನ್ನ ಮಾತ್ರ ಕದ್ದೊಯ್ದಿರುವ ಕಳ್ಳರು ಹಣವನ್ನ ಅಲ್ಲೇ ಉಳಿಸಿರುವುದು ವಿಶೇಷವಾಗಿದೆ.
ಒಟ್ಟಾರೆ ದೇಶವೇ ಲಾಕ್ಡೌನ್ ಆಗಿರುವ ಹಿನ್ನೆಲೆ ಮದ್ಯಪ್ರಿಯರು ಮದ್ಯಕ್ಕಾಗಿ ಪರಿತಪಿಸುತ್ತಿದ್ದು, ಇತ್ತೀಚೆಗೆ ಬಾರ್ ಕಳ್ಳತನಗಳು ಹೆಚ್ಚಾಗುತ್ತಿವೆ.