ಕೋಲಾರ:ಜಿಲ್ಲೆಯ ಬಂಗಾರಪೇಟೆಯಲ್ಲಿ ಕೂಲಿ ಹಣ ಕೇಳಿದ್ದಕ್ಕಾಗಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಅಮರೇಶ್ ಎಂಬುವನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಅಮರೇಶ್ ಗಾರೆ ಕೆಲಸ ಮಾಡಿಕೊಂಡಿದ್ದು, ಅದೇ ಗ್ರಾಮದ ಜಗದೀಶ್ ಸಿಂಗ್ ಎಂಬುವರ ಹೊಸ ಮನೆ ನಿರ್ಮಾಣದ ಕೆಲಸಕ್ಕೆ ಹೋಗುತ್ತಿದ್ದ.
ಅಲ್ಲಿ ಕೆಲಸ ಮಾಡಿದ್ದರಿಂದ ಕೂಲಿ ಕೇಳಿದ್ದಕ್ಕೆ ಜಗದೀಶ್ ಸಿಂಗ್ ಎಂಬುವರು ಅಮರೇಶ್ ಮೇಲೆ ಹಲ್ಲೆ ನಡೆಸಿದ್ದು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ಜಗದೀಶ್ ಸಿಂಗ್ ಜೊತೆಗೆ ರವೀಂದ್ರ ಸಿಂಗ್ ಹಾಗೂ ಸತೀಶ್ ಸಿಂಗ್ ಎಂಬುವರು ಸಹ ಹಲ್ಲೆ ನಡೆಸಿದ್ದಾರೆ. ಜೊತೆಗೆ ಮನೆಯ ಬಳಿ ಕರೆದುಕೊಂಡು ಹೋಗಿ ಹಗ್ಗದಿಂದ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಗಾಯಗೊಂಡ ಅಮರೇಶನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಜಗದೀಶ್ ಸಿಂಗ್ ಹಾಗೂ ರವೀಂದ್ರ ಸಿಂಗ್ ಎಂಬುವರನ್ನು ಬಂಧಿಸಿದ್ದು, ಸತೀಶ್ ಸಿಂಗ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.