ಮಡಿಕೇರಿ:ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಭೇಟಿ ಹಾಗೂ ಸಂತ್ರಸ್ತರ ಅಹವಾಲು ಸ್ವೀಕಾರ ಸಭೆಯಲ್ಲಿ ಸಮಸ್ಯೆಗಳ ಸರಮಾಲೆಗಳೇ ವ್ಯಕ್ತವಾದವು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಸಚಿವ ವಿ. ಸೋಮಣ್ಣ ಸಾರ್ವಜನಿಕ ಅಹವಾಲು ಸಭೆ ನಡೆಸಿದರು. ನಮಗೆ ವರ್ಷ ಕಳೆದರೂ ವಾಸಿಸಲು ಮನೆಯೇ ಇಲ್ಲ. ಗ್ರಾಮ ಪಂಚಾಯತ್ನಿಂದ ಅರ್ಹ ಫಲಾನುಭವಿಗಳನ್ನು ಕೈಬಿಡಲಾಗಿದೆ ಎಂದು ನಿರಾಶ್ರಿತರು ಅಳಲು ತೋಡಿಕೊಂಡರು. ಆಗ ಸಚಿವರು ಕಾಲಾವಕಾಶ ಕೇಳಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ರು.
ಕಾಫಿ ಬೆಳೆಗಾರರೊಬ್ಬರು ನಾವು ಸಮರ್ಪಕವಾಗಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದರೂ ಚೆಸ್ಕಾಂ ಸಿಬ್ಬಂದಿ ಅನಗತ್ಯವಾಗಿ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು. ಈ ವೇಳೆ ಚೆಸ್ಕಾಂ ಅಧಿಕಾರಿ ವಿರುದ್ಧ ಗರಂ ಆದ ಸೋಮಣ್ಣ, ಅವರಿಗೆ ಕರೆಂಟ್ ಕಟ್ ಮಾಡಬೇಡಿ ಎಂದು ಸ್ಥಳದಿಂದಲೇ ಮೇಲಾಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದ್ರು.
ಸಭೆಯಲ್ಲಿ ನಿರಾಶ್ರಿತರಿಗೆ ನಿರ್ಮಾಣ ಹಂತದಲ್ಲಿರುವ ಮನೆಗಳು ಹಾಗೂ ಬ್ರಹ್ಮಗಿರಿ ಬೆಟ್ಟದಲ್ಲಿ ಕಾಣಿಸಿಕೊಂಡಿರುವ ಬಿರುಕಿನ ಬಗ್ಗೆ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
ಸಭೆಯಲ್ಲಿ ಶಾಸಕ ಕೆ. ಜಿ. ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಭ್ರಹ್ಮಣಿ, ವೀಣಾ ಅಚ್ಚಯ್ಯ ಸೆರಿದಂತೆ ಇತರೆ ಜನಪ್ರತಿನಿಧಿಗಳು ಉಪಸ್ಥಿತರಿದ್ರು.