ಕೊಡಗು: 'ಕರ್ನಾಟಕದ ಕಾಶ್ಮೀರ' ಎಂದು ಕರೆಯುವ ಕೊಡಗಿನಲ್ಲಿ ಈಗ ಆಟಿ (ಆಷಾಢ) ಹಬ್ಬದ ಸಂಭ್ರಮ. ಈ ಹಬ್ಬವನ್ನು ಇಲ್ಲಿನ ಜನರು ಕಕ್ಕಡ 18 ಎಂದು ಕರೆಯುತ್ತಾರೆ. ಆಷಾಢ ಮಾಸದ 18ನೇ ದಿನ 18 ಔಷಧೀಯ ಗುಣವುಳ್ಳ ವಿಶೇಷ ಸೊಪ್ಪಿನಿಂದ ವಿಶೇಷವಾದ ಖಾದ್ಯಗಳನ್ನು ತಯಾರು ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ನಾಟಿ ಕೋಳಿ ಸಾರು, ಪುಟ್ಟು, ಘಮ ಘಮಿಸುವ ಔಷಧೀಯ ಗುಣವುಳ್ಳ ಆಟಿ ಸೊಪ್ಪಿನ ಪಾಯಸ, ಮದ್ದು ಪುಟ್ಟು, ಪತ್ರೊಡೆ, ಕೊಡಗಿನ ಸ್ಪೆಷಲ್ ಪಂದಿ ಕರಿ ಮುಂತಾದ ತಿನಿಸುಗಳನ್ನು ತಯಾರು ಮಾಡುತ್ತಾರೆ. ಪ್ರಕೃತಿಯಲ್ಲಿ ದೊರಕುವ ಔಷಧೀಯ ಗುಣವುಳ್ಳ ಸಸ್ಯಗಳಿಂದ ತಯಾರು ಮಾಡಲಾಗುವ ಆಹಾರ ಈ ಆಟಿ ಹಬ್ಬದ ವಿಶೇಷತೆ.
ಕೊಡಗಿನಲ್ಲಿ ಕಕ್ಕಡ 18 ಆಚರಣೆ ಕೊಡಗಿನಲ್ಲಿ ಕಕ್ಕಡ 18 ರಂದು ಆಟಿ ಸೊಪ್ಪು ವಿಶೇಷ ಪಾತ್ರ ವಹಿಸುತ್ತದೆ. ಈ ಸೊಪ್ಪು ಆಷಾಢ ಮಾಸದಲ್ಲಿ ಮಾತ್ರ ಲಭ್ಯವಾಗುವಂತಹದ್ದು. ಆಷಾಢ ಮಾಸ ಬಂದರೆ ಕಾವೇರಿ ನಾಡಲ್ಲಿ ಆಟಿ ಹಬ್ಬದ ಸಡಗರ ಮನೆ ಮಾಡುತ್ತದೆ. ಸದ್ಯ ಕೊಡಗಿನಲ್ಲಿ ಮಳೆಗಾಲದ ವಾತಾವರಣವೂ ಇದ್ದು ಆಟಿ ಸಡಗರ ಕಳೆಗಟ್ಟಿದೆ.
ಆಟಿ ಸೊಪ್ಪನ್ನು ಸೇವಿಸಿದರೆ, ಮಳೆಗಾಲದಲ್ಲಿ ಶೀತ ಜ್ವರದಿಂದ ತಮ್ಮ ದೇಹವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಇದು ನಿನ್ನೆ ಮೊನ್ನೆಯ ಸಂಪ್ರದಾಯಲ್ಲ. ಬದಲಾಗಿ ಶತಮಾನಗಳಿಂದ ಕೊಡಗಿನಲ್ಲಿ ಇಂತಹದ್ದೊಂದು ವಿಶಿಷ್ಟ ಆಚರಣೆ ನಡೆದುಕೊಂಡು ಬಂದಿದೆ.