ಕರ್ನಾಟಕ

karnataka

ETV Bharat / state

ಮಡಿಕೇರಿಯಲ್ಲಿ ಡಿ. 24 ಮತ್ತು 25 ರಂದು 'ಜೇನು ಹಬ್ಬ' - ಜೇನು ಮೇಳ ಆಯೋಜನೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ

ಕೊಡಗು ಜಿಲ್ಲೆಯಲ್ಲಿ ಜೇನು ಕೃಷಿಯನ್ನು ಉತ್ತೇಜಿಸಲು ಜೇನು ಹಬ್ಬ 2022 ಆಯೋಜನೆ ಮಾಡಲಾಗಿದೆ. ಡಿಸೆಂಬರ್ 24 ಮತ್ತು 25ರಂದು ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಜೇನು ಹಬ್ಬ ನಡೆಯಲಿದೆ.

honey festival
ಜೇನು ಮೇಳ

By

Published : Dec 23, 2022, 9:16 AM IST

ಜೇನು ಹಬ್ಬದ ಕುರಿತು ಮಾಹಿತಿ ನೀಡಿದ ಡಿಸಿ ಡಾ. ಬಿ.ಸಿ ಸತೀಶ

ಮಡಿಕೇರಿ: ಕೊಡಗಿನ ಜೇನುತುಪ್ಪಕ್ಕೆ ಭಾರಿ ಬೇಡಿಕೆ ಇರುವ ಕಾರಣ ಜೇನು ಕೃಷಿಗೆ ಉತ್ತೇಜನ ನೀಡಲು ಮಡಿಕೇರಿಯ ರಾಜಾ ಸೀಟ್​ನಲ್ಲಿ ಎರಡು ದಿನಗಳ ಕಾಲ ಜೇನು ಮೇಳ ಆಯೋಜನೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಮಡಿಕೇರಿ ಕೃಷಿ ವಿಸ್ತರಣಾ ಘಟಕ, ಭಾಗಮಂಡಲ ಮತ್ತು ವಿರಾಜಪೇಟೆ, ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಇವರ ಸಹಯೋಗದಲ್ಲಿ ನಗರದ ರಾಜಾಸೀಟ್​ ಉದ್ಯಾನದಲ್ಲಿ ಡಿಸೆಂಬರ್ 24 ಮತ್ತು 25 ರಂದು ‘ಜೇನು ಹಬ್ಬ’ ನಡೆಯಲಿದ್ದು, ಜಿಲ್ಲೆಯ ಜೇನು ಕೃಷಿಕರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.

ನಗರದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಕೊಡಗು ಜೇನು ಕೃಷಿಗೆ ಹೆಸರುವಾಸಿಯಾಗಿದ್ದು, ಜೇನು ಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ಜೇನು ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಮಡಿಕೇರಿಯ ರಾಜಾಸೀಟು ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ವಿಶೇಷ ಮೇಳವನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ವೈನ್ ಮೇಳ ಆಯೋಜಿಸಲು ಉದ್ದೇಶಿಸಲಾಗಿದೆ. ಜೊತೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಹೇಳಿದರು

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಮಾತನಾಡಿ, ಇದುವರೆಗೆ 20 ವಿವಿಧ ಜೇನು ಉತ್ಪನ್ನ ಸಹಕಾರ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಪುತ್ತೂರು, ಸುಳ್ಯ ಭಾಗದಿಂದಲೂ ಜೇನು ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಅವಕಾಶ ಕಲ್ಪಿಸುವಂತೆ ಅರ್ಜಿ ಸಲ್ಲಿಕೆಯಾಗಿದೆ. ಎಲ್ಲರಿಗೂ ಅವಕಾಶ ನೀಡಲಾಗುವುದು. ಜೇನು ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತಿ ಆರ್ಥಿಕ ವರ್ಷದಲ್ಲಿ ಸಹಾಯ ಧನ ಕಲ್ಪಿಸಲಾಗುತ್ತದೆ. ಇದೊಂದು ನಿರಂತರ ಕಾರ್ಯಕ್ರಮವಾಗಿದೆ ಎಂದರು.

ಇದನ್ನೂ ಓದಿ:20 ಸಾವಿರದಿಂದ 18 ಕೋಟಿಯ ಪಯಣ.. ಇದು ಶಿರಸಿಯ ಕೃಷಿಕನ ಯಶೋಗಾಥೆ!

ಜೇನು ಕೃಷಿ ಮಾಹಿತಿ:ಕೊಡಗು ಜಿಲ್ಲೆಯಲ್ಲಿ ಹಿಂದೆ ಜೇನು ಕೃಷಿಯು ಒಂದು ಪ್ರಮುಖ ಉಪ ಕಸುಬಾಗಿ ಹೆಚ್ಚು ಪ್ರಸಿದ್ಧಿ ಹೊಂದಿ, ರೈತರ ಜೀವನೋಪಾಯದ ಮುಖ್ಯ ಆಧಾರವಾಗಿತ್ತು. ಆದರೆ, ನಂತರದಲ್ಲಿ ಥ್ರ್ಯಾಸಾಕ್​ ಬ್ರೂಡ್ ಎಂಬ ವೈರಸ್ ರೋಗದಿಂದ ಜಿಲ್ಲೆಯಲ್ಲಿ ಜೇನು ಕೃಷಿ ಅವನತಿಯ ಹಾದಿ ತಲುಪಿತ್ತು. ಇದೀಗ ಕಳೆದ 10-12 ವರ್ಷಗಳಲ್ಲಿ ಜೇನು ಕೃಷಿ ಮತ್ತೆ ಪುನಃಶ್ಚೇತನಗೊಂಡಿದ್ದು, ಹೆಚ್ಚು ರೈತರು ಜೇನು ಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ.

ಕೊಡಗಿನಲ್ಲಿ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ವಿವಿಧ ಜಾತಿಯ ಮರ, ಗಿಡ, ಬಳ್ಳಿ, ಪುಷ್ಪಗಳ ಮಕರಂಧ ಮತ್ತು ಪರಾಗವನ್ನು ಸಂಗ್ರಹಿಸಿ ಜೇನು ತುಪ್ಪ ಉತ್ಪಾದನೆ ಮಾಡುವುದರಿದ ಹೆಚ್ಚು ಶ್ರೇಷ್ಠವಾಗಿದೆ. ಜೊತೆಗೆ ಔಷಧಿಯ ಗುಣ ಸಹ ಹೊಂದಿದೆ. ಆದ್ದರಿಂದ ಕೊಡಗಿನ ಜೇನಿಗೆ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಬೇಡಿಕೆ ಇದೆ.

ಇದನ್ನೂ ಓದಿ:ಜೇನು ಕೃಷಿಗೆ ಥ್ರ್ಯಾಸಾಕ್ ಬ್ರೂಡ್ ವೈರಸ್ ಬಾಧೆ.. ಸಂಕಷ್ಟದಲ್ಲಿ ಜೇನು ಕೃಷಿಕರು

ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ 12,897 ಸಂಖ್ಯೆಯ ಜೇನು ಕೃಷಿಕರಿದ್ದು, 60,500 ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳಿವೆ. ವಾರ್ಷಿಕ 499.47 ಟನ್ ಜೇನು ಉತ್ಪಾದನೆ ಆಗುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಜೇನು ಕೃಷಿ ಉತ್ತೇಜನಗೊಳಿಸಲು ಜೇನು ಕೃಷಿಕರು, ವಿಜ್ಞಾನಿಗಳು, ಜೇನು ಕೃಷಿ ಅಧಿಕಾರಿಗಳು ಹಾಗೂ ಜೇನು ಸಹಕಾರ ಸಂಘಗಳು ಮತ್ತು ಜೇನು ಪರಿಕರ ತಯಾರಕರು, ಜೇನು ತುಪ್ಪ ಉತ್ಪಾದನೆಯ ಸಂಸ್ಥೆಯನ್ನು ಒಂದೇ ವೇದಿಕೆಗೆ ಕರೆತಂದು ಕೊಡಗಿನ ಜೇನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಜೇನು ಹಬ್ಬ 2022 ಆಯೋಜಿಸಲಾಗಿದೆ.

ABOUT THE AUTHOR

...view details