ಕೊಡಗು:ರಾತ್ರಿ ವಾಹನ ಸಂಚಾರದಿಂದ ವನ್ಯಜೀವಿಗಳು ಅಪಘಾತಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ಸ್ಪೀಡ್ ಬ್ರೇಕರ್ ಹಾಕುವಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕೆಲವು ತಿಂಗಳ ಹಿಂದೆ ಮತ್ತಿಗೋಡು ಸಾಕಾನೆ ಶಿಬಿರದಿಂದ ಆನೆಯೊಂದು ಮೇಯಲು ಕಾಡಿಗೆ ತೆರಳಿ ಪುನಃ ಶಿಬಿರಕ್ಕೆ ವಾಪಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಬಸ್ಸು ಆನೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಆನೆ ಸಾವನ್ನಪ್ಪಿತ್ತು. ಇದನ್ನು ಮನಗಂಡ ಸ್ಥಳೀಯ ಮಹೇಶ್ ಎಂಬುವರು ಮೈಸೂರಿನಿಂದ ಹುಣಸೂರು, ಪಿರಿಯಾಪಟ್ಟಣದಿಂದ ವಿರಾಜಪೇಟೆವರೆಗೆ ಇರುವ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರದಿಂದ ವನ್ಯಜೀವಿ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ನಾಗರಹೊಳೆ ಅಭಯಾರಣ್ಯ ಒಳಗೆ ಹಾದುಹೋಗುವ 11 ಕಿಲೋಮೀಟರ್ ರಸ್ತೆಯ ಪ್ರತಿ 500 ಮೀಟರ್ಗೆ ಹಂಪ್ಗಳನ್ನು ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಕೇರಳದ ಗಡಿಗೆ ಹೊಂದಿರುವ ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಸಾಕಷ್ಟು ಸಾರಿಗೆ ಬಸ್ಸು, ಪ್ರವಾಸಿ ವಾಹನಗಳ ಮತ್ತು ಲಾರಿಗಳು ವೇಗವಾಗಿ ಹೋಗುವ ಪರಿಣಾಮ ರಾತ್ರಿ ಹೊತ್ತಿನಲ್ಲಿ ಓಡಾಡುವ ಕಾಡು ಪ್ರಾಣಿಗಳು ವಾಹನಗಳ ಹೆಡ್ಲೈಟ್ ಬೆಳಕಿನಲ್ಲಿ ದಿಕ್ಕು ಕಾಣದೆ ಅಪಘಾತಕ್ಕೆ ಸಿಲುಕಿ ಸಾವನಪ್ಪುತ್ತಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧಿಸಿದಂತೆ ಇಲ್ಲಿಯೂ ಅದೇ ಕಾನೂನನ್ನು ತರುವಂತೆ ಮನವಿ ಸಲ್ಲಿಸಲಾಗಿತ್ತು.
ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಾಹನ ಸಂಚಾರಕ್ಕೆ ಅಡ್ಡಿ ಆಗದಂತೆ ವನ್ಯಜೀವಿಗೂ ತೊಂದರೆ ಆಗದ ರೀತಿಯಲ್ಲಿ ಈ ತೀರ್ಪು ನೀಡಲಾಗಿದೆ. ಹಂಪ್ಗಳ ನಿರ್ಮಾಣ ಮಾಡಲು 50 ಸ್ಥಳಗಳನ್ನು ಗುರುತಿಸಲಾಗಿದೆ. ಇನ್ನು 10 ದಿನಗಳಲ್ಲಿ ಈ ಕಾರ್ಯ ನಡೆಯಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.