ಕೊಡಗು:ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಕಾವೇರಿನದಿ ಮತ್ತು ಉಪನದಿಗಳ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಭೂಕಂಪ ಪೀಡಿತ ಪ್ರದೇಶಗಳ ಆಸು ಪಾಸಿನಲ್ಲೆ ಗುಡ್ಡಗಳು ಕುಸಿಯಲಾರಂಬಿಸಿದ್ದು, ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ರಸ್ತೆ ಉಬ್ಬತೊಡಗಿದೆ. ಪರಿಣಾಮ ಜನ ಆತಂಕದಲ್ಲಿದ್ದಾರೆ.
ಕೊಡಗಿನಲ್ಲಿ ನಿರಂತರ ಮಳೆಗೆ ಗುಡ್ಡ ಕುಸಿತವಾಗಿರುವುದು ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಪರಿಣಾಮ ಕಾವೇರಿ ನದಿ ತೋರೆ ಹಳ್ಳ-ಕೊಳ್ಳ, ನದಿ-ತೊರೆಗಳು ಅಪಾಯದ ಮಟ್ಟಮೀರಿ ತುಂಬಿ ಹರಿಯುತ್ತಿವೆ. ನದಿ ತೀರ ಪ್ರದೇಶದಲ್ಲಿ ವಾಸಮಾಡುವ ಜನರಿಗೆ ಭಯ ಶುರುವಾಗಿದೆ. ಇನ್ನೂ ಭಾಗಮಂಡಲ ತಲಕಾವೇರಿಯಲ್ಲಿ ಹೆಚ್ಚು ಮಳೆಯಾಗಿದ್ದು ಭಾಗಮಂಡಲದಿಂದ ನಾಪೋಕ್ಲು ಹೋಗುವ ರಸ್ತೆ ಸ್ಥಗಿತವಾಗಿದೆ. ಈ ಭಾಗದ ಬೆಟ್ಟ-ಗುಡ್ಡಗಳಲ್ಲಿ ವಾಸಮಾಡುವ ಜನರು ಭಯಪಡುವಂತಾಗಿದೆ.
ಹೆಚ್ಚು ಮಳೆಯ ಎಫೆಕ್ಟ್ನಿಂದಾಗಿ ಎತ್ತರ ಪ್ರದೇಶದ ಹಾಗೂ ಕಳೆದ ಮಳೆಗಾಲದಲ್ಲಿ ಮೆದುವಾದ ಮಣ್ಣುಗಳು ಇದೀಗ ಮತ್ತೆ ಕುಸಿಯಲಾರಂಭಿಸಿದೆ. ಇಂದು ಕೂಡ ಮಡಿಕೇರಿ ಸಮೀಪದ ತಾಳತ್ ಮನೆ ವ್ಯಾಪ್ತಿಯಲ್ಲೂ 30 ಅಡಿ ಎತ್ತರ ಗುಡ್ಡಕುಸಿತವಾಗಿದ್ದು ಸಣ್ಣ ಪ್ರಮಾಣದ ಮಣ್ಣು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮಡಿಕೇರಿ -ಮಂಗಳೂರು ರಸ್ತೆಯಲ್ಲಿ ಕೆಲ ಕಾಲ ರಸ್ತೆ ಸಂಚಾರ ಬಂದ್ ಆಗಿದೆ.
ಹೀಗಾಗಿ, ಜೆಸಿಬಿ ಮೂಲಕ ರಸ್ತೆಗೆ ಅಡ್ಡಲಾಗಿ ಬಿದ್ದ ಮಣ್ಣಿನ ತೆರವುಗೊಳಿಸುತ್ತಿದ್ರು, ಮಣ್ಣು ಮೇಲಿಂದ ಜಾರುತ್ತಿದೆ. 2010 ರಲ್ಲಿ ಗುಡ್ಡಕುಸಿತವಾದ ಕರ್ತೋಜಿ ಬಳಿ ಮತ್ತೆ ಇದೀಗ ಮಣ್ಣು ಜಾರಿ ರಸ್ತೆಗೆ ಬೀಳುತ್ತಿದೆ. ಅದೇ ಜಾಗದಲ್ಲಿ ರಸ್ತೆಯ ಒಂದು ಬದಿ ಉಬ್ಬಿ ಹೋಗಿದ್ದು, ಡಾಂಬಾರ್ ಕಿತ್ತು ಬರುತ್ತಿದೆ. ಹೀಗಾಗಿ ರಸ್ತೆ ಸಂಚಾರಕ್ಕೆ ಹೆದರುವಂತಾಗಿದೆ.
ಮಡಿಕೇರಿ ಸಮೀಪದ ಕರ್ತೋಜಿ ಗ್ರಾಮದ ಬಳಿ ಬ್ಯಾರಿಕೇಡ್ ಹಾಕಿ ಏಕ ಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರ ಪಕ್ಕದಲ್ಲೇ ಭಾರಿ ಪ್ರಮಾಣದ ನೀರು ಕೂಡ ಹರಿಯುತ್ತಿದ್ದು, ಮತ್ತೆ ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ. ಕರ್ತೋಜಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 275 ಬಹುತೇಕ ಹಾನಿಯಾಗಿದ್ದು, ಇದೇ ರೀತಿ ಮಣ್ಣು ಜಾರಿದಲ್ಲಿ ಮಡಿಕೇರಿ ಮಂಗಳೂರು ರಸ್ತೆ ಖಡಿತಗೊಳ್ಳುವ ಸಾಧ್ಯತೆ ಇದೆ.
ಸುಗಮ ಸಂಚಾರಕ್ಕೆ ಅನುವು:ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ನಾಗರಾಜ್ ಪರಿಶೀಲನೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ 2/3 ಭಾಗದಲ್ಲಿ ಸಣ್ಣ ಪ್ರಮಾಣದ ಗುಡ್ಡಕುಸಿತವಾಗಿದ್ದು, ಎರಡು ಜೆಸಿಬಿ ಬಳಸಿ ರಸ್ತೆಗೆ ಬಿದ್ದ ಮಣ್ಣಿನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಕರ್ತೊಜಿ ಭಾಗದಲ್ಲೂ ಅಲ್ಪ ಪ್ರಮಾಣ ಹಾನಿಯಾಗಿದ್ದು, ಮಣ್ಣನ್ನ ತೆರವುಗೊಳಿಸಿ ರಸ್ತೆಯನ್ನ ಆದಷ್ಟು ಬೇಗ ದುರಸ್ತಿಗೊಳಿಸಲಾಗುವುದು. ಗುಡ್ಡದ ಪಕ್ಕದಲ್ಲೆ ನೀರಿನ ಹರಿವು ಕೂಡ ಹೆಚ್ಚಿದೆ. ಹೀಗಾಗಿ, ಆಳವಾದ ಚರಂಡಿ ಮಾಡಿ ನೀರಿನ ದಿಕ್ಕನ್ನು ಬದಲಿಸಿ ರಸ್ತೆಗೆ ಹಾನಿಯಾಗದಂತೆ ತಡೆಯಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ನಾಗರಾಜು ತಿಳಿಸಿದ್ದಾರೆ.
ಓದಿ:2024ರ ಮಕರ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಕಾರ್ಯ ಪೂರ್ಣ: ಪೇಜಾವರ ಶ್ರೀ