ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಧಾರಾಕಾರ ಮಳೆ: ಹಲವು ಬಡಾವಣೆಗಳು ಜಲಾವೃತ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ - ಕೊಡಗಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಈಗಾಗಲೇ ರಕ್ಷಣಾ ಮತ್ತು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ವಿದ್ಯುತ್ ಪೂರೈಕೆಯಲ್ಲಿಯೂ ಅಡಚಣೆ ಉಂಟಾಗಿದೆ.

flood
flood

By

Published : Aug 6, 2020, 9:13 AM IST

Updated : Aug 6, 2020, 9:44 AM IST

ಕೊಡಗು (ಕುಶಾಲನಗರ):ಜಿಲ್ಲಾದ್ಯಂತ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣ ವ್ಯಾಪ್ತಿಯ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ.

ರಾತ್ರಿಯಿಡೀ ಸುರಿದ ಮಳೆಗೆ ನೀರಿನ ಮಟ್ಟ ಏರಿಕೆಯಾಗಿ ನದಿ ತಟದ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳು ಜಲಾವೃತಗೊಂಡಿವೆ. ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾಯಿ ಹಾಗೂ ಕುವೆಂಪು ಬಡಾವಣೆ ಸೇರಿದಂತೆ 10ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ.

ಕೊಡಗಿನಲ್ಲಿ ಧಾರಾಕಾರ ಮಳೆ

ನೆರೆ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ರಕ್ಷಣಾ ಮತ್ತು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸ್ಥಳೀಯ ಹಲವು ಸಂಘಟನೆಗಳ ಯುವಕರ ತಂಡ ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಲಾವೃತಗೊಂಡ ಮನೆಗಳನ್ನು ಖಾಲಿ ಮಾಡಿದ ಸಂತ್ರಸ್ತರು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದು ಕೊಂಡಿದ್ದಾರೆ.

ಈಗಾಗಾಲೇ ದುಬಾರೆ ರಿವರ್‌ ರ‍್ಯಾಫ್ಟಿಂಗ್‌ನ 4 ರ‍್ಯಾಫ್ಟರ್‌ ಬೋಟ್‌ಗಳನ್ನು ಬಳಸಿಕೊಂಡು ಜಲಾವೃತಗೊಂಡ ಮನೆಗಳಿಂದ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಈ ನಡುವೆ ಹಾರಂಗಿ ಜಲಾಶಯದಿಂದ ನದಿ ನೀರು ಹರಿಸಿದ ಪರಿಣಾಮ ಜಲಾವೃತಗೊಂಡ ಬಡಾವಣೆಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ. ಹೀಗಾಗಿ ಅಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ.

ಮಳೆಯಾಗುತ್ತಿರುವ ಹಿನ್ನೆಲೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ವಿದ್ಯುತ್ ಅಡಚಣೆ ಹಾಗೂ ಇತರ ಸಮಸ್ಯೆ ಕುರಿತು 1912 ಸಹಾಯವಾಣಿಗೆ ಮಾಹಿತಿ ನೀಡುವಂತೆ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರ - ಪೊನ್ನಂಪೇಟೆ 66 ಕೆ.ವಿ ವಿದ್ಯುತ್ ಮಾರ್ಗಕ್ಕೆ 4ರಿಂದ 5 ಕಡೆ ಬೃಹತ್ ಮರಗಳು ತುಂಡಾಗಿ ಬಿದ್ದಿದ್ದು, ಅವುಗಳನ್ನು ತೆರವುಗೊಳಿಸಲಾಗುತ್ತಿದೆ.‌ ಸದ್ಯ ಈ ವಿದ್ಯುತ್ ಮಾರ್ಗದಲ್ಲಿ ಭಾರಿ ಗಾತ್ರದ ಮರಗಳು ತುಂಡಾಗಿ ಬಿದ್ದಿರುವುದರಿಂದ ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಹಾಗೆಯೇ ಜಿಲ್ಲೆಯ ಎಲ್ಲ ಭಾಗದಲ್ಲಿಯೂ ವ್ಯಾಪಕ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಗಳು ಎದುರಾದರೆ ಜನತೆ 1912 ಸಹಾಯವಾಣಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

Last Updated : Aug 6, 2020, 9:44 AM IST

ABOUT THE AUTHOR

...view details