ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣನ ಮರಣ ಮೃದಂಗ ಮುಂದುವರೆದಿದೆ. ಪ್ರವಾಹ ಹಾಗೂ ಭೂ ಕುಸಿತದಿಂದ ಮೃತರ ಸಂಖ್ಯೆ ಏಳಕ್ಕೆ ಏರಿದೆ.
ಮತ್ತೆ ಜಲಪ್ರಳಯ... ಕೊಡಗು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಏಳಕ್ಕೇರಿಕೆ, 8 ಮಂದಿ ಕಣ್ಮರೆ!
ರಾಜ್ಯದ ಹಲವೆಡೆ ಸುರಿಯುತ್ತಿರುವ ಭಾರಿ ಮಳೆಯಿಂದ ಸಾಕಷ್ಟು ಹಾನಿಯಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಭೂಕುಸಿತ ಹಾಗೂ ಅಪಾಯಮಟ್ಟದ ನೀರಿನ ಹರಿವಿನಿಂದ ಕೊಡಗು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ವಿರಾಜಪೇಟೆ ತಾಲೂಕಿನ ಕೊರಂಗಾಲದಲ್ಲಿ ಭೂ ಕುಸಿತದಲ್ಲಿ ಯಶವಂತ ಅತ್ತೇರಿ, ಬಾಲಕೃಷ್ಣ ಬೋಳನ, ಯಮುನಾ ಬೋಳನ, ಉದಯ ಕಾಳನ ಹಾಗೂ ವಸಂತ್ ಸೇರಿದ ಐವರು ಮೃತಪಟ್ಟಿದ್ದಾರೆ. ಹಾಗೆಯೇ ತಾಲೂಕಿನ ತೋರದಲ್ಲಿ ಮನೆ ಕುಸಿದು ತಾಯಿ ಮಮತಾ (45) ಮತ್ತು ಮಗಳು ಲಿಖಿತಾ (14) ಮೃತಪಟ್ಟಿದ್ದಾರೆ. ಉಳಿದಂತೆ ವಿರಾಜಪೇಟೆ ವ್ಯಾಪ್ತಿಯಲ್ಲಿ ಹರೀಶ್ ಮತ್ತು ಪ್ರಭು ಎಂಬುವರ ಎರಡು ಕುಟುಂಬಗಳ 8 ಮಂದಿ ಕಣ್ಮರೆಯಾಗಿದ್ದಾರೆ.
ಈ ಸಂಬಂಧ ವಿರಾಜಪೇಟೆ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಎನ್‌ಡಿಆರ್‌ಎಫ್ ಹಾಗೂ ಪೊಲೀಸ್ ಸಿಬ್ಬಂದಿ ತೋರ ಗ್ರಾಮದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 300 ನಿರಾಶ್ರಿತರನ್ನು ಸಂರಕ್ಷಣೆ ಮಾಡಿದ್ದಾರೆ. ಪ್ರತಿಕೂಲ ಹವಾಮಾನ ಹಾಗೂ ಮಳೆ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಆ ಭಾಗದಲ್ಲಿ ಕಾವೇರಿ ನದಿ ನೀರಿನ ಹರಿವು ಹೆಚ್ಚಿರುವುದರಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.