ಕೊಡಗು:ರಾಜ್ಯ ಹಾಗೂ ಹೊರ ರಾಜ್ಯಕ್ಕೆ ನೀರು ಕೊಡುವ ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮಡಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಎರಡು ದಿನಕೊಮ್ಮೆ ನೀರು ಬಿಡುತ್ತಿದ್ದು ಜನ ಕುಡಿಯಲು ನೀರಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮಾತ್ರ ನೀರಿನಿಂದ ಜಲಪ್ರಳಯವಾಗಿ ಬಾರಿ ಅವಾಂತರಗಳು ಸೃಷ್ಟಿಯಾಗುತ್ತವೆ. ನೀರಿನಿಂದ ಜನರ ಬದುಕು ಬೀದಿಪಾಲಾಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ದುರಂತ ಅಂದ್ರೆ ಮಳೆಗಾಲ ಹೋಯ್ತು ಅಂದ್ರೆ ಸಾಕು ಜಲ ಪ್ರಳಯದಿಂದ ತತ್ತರಗೊಳ್ಳುವ ಮಡಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗುತ್ತದೆ. ಈಗ ಬೇಸಿಗೆ ಆರಂಭವಾಗಿದ್ದು, ಮಡಿಕೇರಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಎರಡು ದಿನಗಳಿಗೆ ಒಂದು ಬಾರಿ ಮಾತ್ರ ನೀರು ಬಿಡುತ್ತಿದ್ದು, ಜನರು ನೀರಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.
ಎರಡು ದಿನಗಳಿಗೊಮ್ಮೆ ನೀರು ಪೂರೈಕೆ: ಮಡಿಕೇರಿ ನಗರಕ್ಕೆ ಸಮೀಪದ ಕೂಟು ಹೊಳೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಬೇಸಿಗೆ ಆರಂಭವಾಗಿದ್ದು, ಕೂಟು ಹೊಳೆಯಲ್ಲಿ ನೀರು ತಳಮಟ್ಟ ಸೇರಿದೆ, ಹೊಳೆಯಲ್ಲಿ ನೀರು ಖಾಲಿಯಾಗಿರುವ ಪರಿಣಾಮ ನಗರದ ಜನರಿಗೆ ಕುಡಿಯಲು ನೀರು ಪೂರೈಕೆ ಮಾಡಲು ಕಷ್ಟವಾಗಿದೆ. ಇದರಿಂದ ನಗರಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಕ್ಕೆ ಎರಡು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಮಡಿಕೇರಿ ನಗರಕ್ಕೆ ನೀರು ಪೂರೈಕೆ ಮಾಡುವ ನಗರ ಸಭೆ ಅಧಿಕಾರಿಗಳು ಜನರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕೈಚೆಲ್ಲಿ ಕೂತಿದ್ದಾರೆ.