ಕೊಡಗು:ಹುಲಿ ದಾಳಿಗೆ ಗರ್ಭಿಣಿ ಹಸು ಬಲಿಯಾಗಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಕಾಫಿ ತೋಟದಲ್ಲಿ ನಡೆದಿದೆ. ಇದರಿಂದ ಸ್ಥಳೀಯರು ಜೀವಭಯದಲ್ಲಿ ಸಂಚಾರ ಮಾಡುವಂತಾಗಿದೆ. ಒಂದು ತಿಂಗಳ ಅಂತರದಲ್ಲಿ ಮೂರು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ.
ಕೊಡಗಿನಲ್ಲಿ ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಡಾನೆಗಳು ಬೆಳೆ ನಾಶ ಮಾಡಿ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಈಗ ಹುಲಿ ದಾಳಿ ಶುರುವಾಗಿದೆ. ಸಿದ್ದಾಪುರ ಸಮೀಪದ ಮಾರ್ಗೋಲಿಯಲ್ಲಿ ಪೂವಪ್ಪ ಎಂಬವರಿಗೆ ಸೇರಿದ ಹಸುವಿನ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ.
ಕಳೆದ ಎರಡು ತಿಂಗಳ ಹಿಂದೆ ಇವರಿಗೆ ಸೇರಿದ ಗರ್ಭಿಣಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದಿತ್ತು. ಅರಣ್ಯ ಇಲಾಖೆಯಿಂದ ಪರಿಹಾರ ರೂಪದಲ್ಲಿ ಬಂದ ಹಣದಲ್ಲಿ ಖರೀದಿಸಿದ ಹಸು ಕೂಡ ಈಗ ಹುಲಿ ದಾಳಿಗೆ ಬಲಿಯಾಗಿದೆ. ಇದ್ದ ಒಂದೇ ಹಸು ಹುಲಿ ದಾಳಿಗೆ ಬಲಿಯಾಗಿದ್ದು, ಮಾಲೀಕ ಗೋಳಾಡುತ್ತಿದ್ದಾರೆ.
ಹುಲಿ ಸೆರೆಗೆ ಕಾರ್ಯಾಚರಣೆ:ಕಾಡು ಪ್ರಾಣಿಗಳು ನಾಡಿಗೆ ಬರುವುದನ್ನ ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ. ಈ ಭಾಗದ ಜನರು ಕಾಫಿ ತೋಟದಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ. ಹುಲಿ ದಾಳಿಯಿಂದ ಕೂಲಿಗೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಶೀಘ್ರವೇ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು. ಈ ಹಿನ್ನೆಲೆ ಹುಲಿ ದಾಳಿ ಮಾಡಿದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಾನೆಗಳನ್ನು ಕರೆತಂದು ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ. ಆದರೆ ಇನ್ನೂ ಹುಲಿ ಪತ್ತೆಯಾಗಿಲ್ಲ.
ಇದನ್ನೂ ಓದಿ:ಕೊಡಗಿನಲ್ಲಿ ಮುಂದುವರಿದ ವ್ಯಾಘ್ರನ ಅಟ್ಟಹಾಸ: ಮತ್ತೊಂದು ಹಸು ಬಲಿ