ಕೊಡಗಿನಲ್ಲಿ ಬೇಡು ಹಬ್ಬದ ಸಂಭ್ರಮ ಕೊಡಗು: ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಈ ನಡುವೆ ಕೊಡಗಿನಲ್ಲಿ ಇತಿಹಾಸ ಪ್ರಸಿದ್ಧ ಬೇಡು ಹಬ್ಬದ ಸಂಭ್ರಮ ಮನೆ ಮಾಡಿತ್ತು. ವಿವಿಧ ವೇಷ ಧರಿಸಿ ಭಿಕ್ಷೆ ಬೇಡುತ್ತಾ, ನೃತ್ಯ ಮಾಡುತ್ತ ಕಾಡಿನ ಮಕ್ಕಳು ಸಂಭ್ರಮಿಸಿದರು. ಪ್ರಕೃತಿ ಮಡಿಲಲ್ಲೊಂದು ಸುಂದರ ದೇವಾಲಯ. ಆಸುಪಾಸಿನಲ್ಲಿ ಮನೆಗಳು, ರಸ್ತೆ ಉದ್ದಕ್ಕೂ ಚಂಡೆ, ಓಲಗ, ಹಾಡು, ಹುಲಿ ವೇಷಧಾರಿಗಳ ಅಬ್ಬರ, ವಿದೇಶಿ ಉಡುಪ್ಪು ತೊಟ್ಟ ಹುಡುಗರ ನೃತ್ಯ.. ಇದು ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಆಚರಣೆ ಮಾಡುವ ಬೇಡು ಹಬ್ಬದಲ್ಲಿ ಕಂಡು ಬಂದ ದೃಶ್ಯ.
ಮಂಗಳವಾರ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚಂಬೆಬೆಳ್ಳೂರು ಗ್ರಾಮ ದೇವತೆಯ ಶ್ರೀ ಭಗವತಿ ದೇವಿಯ ಬೇಡು ಹಬ್ಬ ನಡೆಯಿತು. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಬೇಡು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸಾವಿರಾರು ಭಕ್ತರು ಸಂಪ್ರದಾಯದಂತೆ ನಾನ ವೇಷ ಭೂಷಣ ಧರಿಸಿ ಭಕ್ತಿ ಭಾವದಿಂದ ಆಚರಿಸುತ್ತಾರೆ.
ರಾತ್ರಿಯಿಡಿ ಮನೆ ಮನೆಗೆ ತೆರಳಿ ಭಿಕ್ಷೆ:ಕೊಡಗಿನಲ್ಲಿ ಅತಿ ದೊಡ್ಡ ಗ್ರಾಮವಾಗಿರುವ ಚಂಬೆ ಬೆಳ್ಳೂರು ಗ್ರಾಮ ದೇವತೆ ಶ್ರೀ ಭಗವತಿ ದೇವಿ ಬಗ್ಗೆ ಜನರಿಗೆ ಎಲ್ಲಿಲದ ಭಕ್ತಿ. ಯಾವುದೇ ಹರಕೆ ಹೊತ್ತುಕೊಂಡರು ಅದು ಈಡೇರುತ್ತದೆ ಎಂಬ ನಂಬಿಕೆ. ಈ ಕಾರಣಕ್ಕೆ ಪ್ರತಿ ವರ್ಷ ನಡೆಯುವ ಹಬ್ಬದಲ್ಲಿ ನಾನ ರೀತಿಯ ವೇಷ ತೊಟ್ಟು, ಎಷ್ಟೇ ಶ್ರೀಮಂತರಾಗಿದ್ದರೂ ರಾತ್ರಿಯಿಡಿ ಮನೆ ಮನೆಗೆ ತೆರಳಿ ಭಿಕ್ಷೆ ರೀತಿಯಲ್ಲಿ ಹಣ ಪಡೆಯುತ್ತಾರೆ. ರಾಜ್ಯ ಹಾಗೂ ಹೊರ ರಾಜ್ಯದ ಭಕ್ತಾಧಿಗಳು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ.
ಈ ಹಬ್ಬದಲ್ಲಿ ಗ್ರಾಮಸ್ಥರು ಗುಂಪಾಗಿ ವೇಷ ಧರಿಸುತ್ತಾರೆ. ಪ್ರಮುಖವಾಗಿ ಹುಲಿ ವೇಷ. ಹುಲಿಯಂತೆ ಮೈಗೆಲ್ಲ ಬಣ್ಣ ಬಳಿದುಕೊಂಡು ಸೊಂಟಕ್ಕೆ ಬಾಲ ಸುತ್ತಿ ಕುಣಿದರೆ, ಇನ್ನೂ ಕೆಲವರು ಮೈಗೆ ಹುಲ್ಲುನ್ನು ಸುತ್ತಿಕೊಂಡು ನೃತ್ಯ ಮಾಡುತ್ತಾರೆ. ಕೆಲವರು ಮೈಗೆಲ್ಲ ಕೆಸರು ಬಳಿದುಕೊಂಡು ಭೂತದಂತೆ ಕಾಣುತ್ತಿದ್ದರು. ಮಕ್ಕಳು ಸೇರಿದಂತೆ ವೃದ್ಧರು ಕೂಡ ಈ ಹಬ್ಬದಲ್ಲಿ ಸೇರಿ ನೃತ್ಯ ಮಾಡುವುದು ವಿಶೇಷ. ಸ್ವಾಮೀಜಿಗಳ ವೇಷ ತೊಟ್ಟು ಎಲ್ಲರಿಗೂ ಆಶೀರ್ವಾದ ಮಾಡುತ್ತಿರುವವರ ಗುಂಪು ಒಂದೆಡೆಯಾದರೆ, ವಿದೇಶಿ ಯುವತಿಯರ ಉಡುಪು ತೊಟ್ಟ ಇನ್ನೊಂದು ಗುಂಪು ನರ್ತಿಸುತ್ತ ಹಣ್ಣ ವಸೂಲಿ ಮಾಡಿ ಗಮನ ಸೆಳೆಯಿತು.
ವಿಭಿನ್ನ ವೇಷ ತೊಡುವುದು ಪದ್ದತಿ:ಅನಾದಿ ಕಾಲದಿಂದಲೂ ಆಚರಿಸಲಾಗುತ್ತಿರುವ ಈ ಹಬ್ಬವನ್ನು ಇಂದಿಗೂ ಅಷ್ಟೇ ಶ್ರದ್ಧೆ, ಭಕ್ತಿಯಿಂದ ಮುಂದುವರೆಸಲಾಗುತ್ತಿದೆ. ಹಬ್ಬದ 8 ದಿನದ ಹಿಂದೆಯೇ ಹಿಂಸೆಯನ್ನು ತ್ಯಾಜಿಸಿ ಗ್ರಾಮಸ್ಥರು ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ. ಹಬ್ಬದ ಮರುದಿನ ಮಾಂಸಹಾರ ಸೇವಿಸಿ ವೇಷ ತೊಡುತ್ತಾರೆ. ಜತೆಗೆ ಕೆಲವು ಹುಡುಗರು ಹುಡುಗಿಯರ ಉಡುಪುಗಳನ್ನು ತೊಟ್ಟು ಕುಣಿಯುತ್ತಾರೆ. ಈ ರೀತಿಯ ವೇಷ ಭೂಷಗಳನ್ನು ತೊಟ್ಟು ದೇವರಿಗೆ ಹರಿಕೆ ತೀರಿಸುವುದು ಇಲ್ಲಿನ ಪದ್ದತಿ. ಇದು ಈ ದೇವರಿಗೆ ಇಷ್ಟವಾದ ಪದ್ಧತಿಯಂತೆ. ಈ ದೇವರಿಗೆ ಹರಕೆ ಹೊತ್ತುಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಇಲ್ಲಿನ ಜನರ ನಂಬುಗೆ.
ಹಿಂದೆ ಚೆಂಬೆಬೆಳ್ಳೂರು ಗ್ರಾಮದದಲ್ಲಿ ಚೆಂಬು ಕಟ್ಟಿ ಎಂಬ ಜನಾಂಗದವರು ನೆಲೆಸಿದ್ದರು. ಈ ಜನಾಂಗದವರು ಬೇಡಿಕೊಂಡು ಬದುಕನ್ನು ನಡೆಸುತ್ತಿದ್ದರು ಎಂಬ ಪ್ರತೀತಿಯಿದೆ. ಹಾಗಾಗಿ ಬೇಡು ಹಬ್ಬವನ್ನು ಅನಾದಿಕಲದಿಂದಲೂ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಆಚರಣೆ ಮಾಡುತ್ತಾ ಬಂದಿದ್ದಾರೆ. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳು ಪೂರ್ವಕ್ಕೆ ಮುಖ ಮಾಡಿರುತ್ತವೆ. ಆದರೆ ಈ ಭಗವತಿ ದೇವರು ಮಾತ್ರ ಪಶ್ಚಿಮಕ್ಕೆ ಮುಖಮಾಡಿರುವುದು ಇನ್ನೊಂದು ವಿಶೇಷ.
ಇದನ್ನೂ ಓದಿ:ಕೊಡಗಿನಲ್ಲಿ ಬೇಡು ಹಬ್ಬ ಸಂಭ್ರಮ: ಸಿಂಗರಿಸಿದ ಕೃತಕ ಕುದುರೆ ಹೊತ್ತು ಸಾಗಿದ ವ್ರತಧಾರಿಗಳು