ಕಲಬುರಗಿ:ಜಿಲ್ಲೆಯಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆಯೇ ಕುಡಿವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲೂ ಉಪ ಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿವ ನೀರಿಗಾಗಿ ಪರದಾಡುವಂತಾಗಿದೆ.
ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು, ಈ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಕುಡಿವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲಿಯೂ ಕಲಬುರಗಿ ಜಿಲ್ಲೆಯಲ್ಲಿ ದಿನೇ ದಿನೆ ನೀರಿಗಾಗಿ ಪರದಾಟ ಹೆಚ್ಚಾಗಲು ಆರಂಭಿಸಿದೆ. ಉಪಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಅದರಲ್ಲಿಯೂ ತಾಂಡಾಗಳಲ್ಲಿ ಕಿಲೋಮೀಟರ್ ಗಟ್ಟಲೆ ಸಾಗಿ ನೀರು ತರುವ ಅನಿವಾರ್ಯತೆ ಎದುರಾಗಿದೆ.
ನೀರಿಗಾಗಿ ನಿತ್ಯ ಜಗಳಗಳು ನಡೆಯುತ್ತಿವೆ. ಊಟ, ನಿದ್ರೆ ಬಿಟ್ಟು ನೀರಿನ ಹಿಂದೆ ಬೀಳುವಂತಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ರುಮ್ಮನಗುಡಾ ತಾಂಡಾ ಮತ್ತು ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆ ಮಾಡಲೆಂದು 19 ಕೋಟಿಯ ಯೋಜನೆ ರೂಪಿಸಲಾಗಿತ್ತು. 19 ಕೋಟಿ ವ್ಯಯಿಸಿ ಪೈಪ್ ಲೈನ್ ಹಾಕಿ, ಚನ್ನೂರು ಕೆರೆಯಿಂದ ನೀರು ತರಬೇಕೆಂದು ಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ ಕೋಟ್ಯಂತರ ರೂ. ಯೋಜನೆ ಹಳ್ಳ ಹಿಡಿದಿದ್ದು, ಜನ ಮಾತ್ರ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.