ಕಲಬುರಗಿ:ಕೇಂದ್ರ ಸರ್ಕಾರದ ಆದೇಶದ ಅನ್ವಯ ಭಾನುವಾರ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರೆತುಪಡಿಸಿ ಎಲ್ಲ ವ್ಯಾಪಾರ - ವಹಿವಾಟು ಸ್ಥಗಿತಗೊಂಡಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಹೇಳಿದ್ದಾರೆ.
ಮೆಡಿಕಲ್, ಕಿರಾಣಿ, ಆಸ್ಪತ್ರೆ ತೆರೆಯಲು ಮಾತ್ರ ಅನುಮತಿ ನೀಡಲಾಗಿದೆ. ಆಟೋ ಸಂಚಾರ, ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಅನಾವಶ್ಯಕವಾಗಿ ರಸ್ತೆಗೆ ಸಾರ್ವಜನಿಕರು ಬರುವಂತಿಲ್ಲ ಎಂದು ಖಡಕ್ ಆದೇಶ ನೀಡಿದ್ದಾರೆ.
ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ:
ರಂಜಾನ್ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಶುಭಕೋರಿದ ಪೊಲೀಸ್ ಆಯುಕ್ತರು, ಹಬ್ಬದ ದಿನವೆಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತಿಲ್ಲ. ಪರಸ್ಪರ ದೈಹಿಕ ಶುಭಕೋರುವಂತ್ತಿಲ್ಲ. 144 ನಿಷೇದಾಜ್ಞೆ ಜಾರಿಯಲ್ಲಿದ್ದು ಸಾರ್ವಜನಿಕರು ಗುಂಪು ಸೇರುವಂತಿಲ್ಲ ಎಂದರು.
ಪೊಲೀಸ್ ಬಂದೋಬಸ್ತ್:
ರಂಜಾನ್ ಬಂದೋಬಸ್ತ್ ಕರ್ತವ್ಯಕ್ಕೆ ಡಿಸಿಪಿ-1, ಎಸಿಪಿ-5, ಪಿಐ- 17, ಪಿಎಸ್ಐ- 5, ಎಎಸ್ಐ- 50, ಪಿಸಿ- 350, ಹೋಮ್ಗಾರ್ಡ್- 250, ಕೆಎಸ್ಆರ್ಪಿ -3 ತುಕಡಿ, ಸಿಎಆರ್-9 ತುಕಡಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಿಸಿ ಹಾಗೂ ಡ್ರೋನ್ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ ಎಂದು ಹೇಳಿದರು.