ಕಲಬುರಗಿ:ವಾಹನ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಐವರನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ: ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗ್ತಿದ್ದ ಕಾರು... ಐವರ ಪ್ರಾಣ ಉಳಿಸಿದ ಗ್ರಾಮಸ್ಥರು
ಕರಬುರಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕಾರೊಂದು ಕೊಚ್ಚಿಕೊಂಡು ಹೋಗುತ್ತಿತ್ತು. ಗ್ರಾಮಸ್ಥರು ಸಮಯಪ್ರಜ್ಞೆಯಿಂದ ಅದರಲ್ಲಿದ್ದ ಐದು ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.
ಜಿಲ್ಲೆಯ ಹಲವೆಡೆ ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿಹರಿಯುತ್ತಿವೆ. ಬಡದಾಳ ಗ್ರಾಮದ ಹಳ್ಳ ಕೂಡ ಮೈದುಂಬಿದೆ. ಹಳ್ಳ ದಾಟುವಾಗ ಓಮ್ನಿ ಕಾರೊಂದು ನೀರಿನ ರಭಸಕ್ಕೆ ಸಿಲುಕಿ ಮುಂದೆ ಸಾಗಲಾಗದೇ ಸಿಲುಕಿಕೊಂಡಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.
ಕಾರಿನ ಡೋರ್ ಹಾಗೂ ಮರಕ್ಕೆ ಹಗ್ಗ ಕಟ್ಟಿ ಕಾರು ನೀರಿನಲ್ಲಿ ಕೊಚ್ಚಿ ಹೋಗದಂತೆ ತಡೆದಿದ್ದಾರೆ. ಬಳಿಕ ಸಮಯಪ್ರಜ್ಞೆಯಿಂದ ಹಗ್ಗದ ಸಹಾಯದಿಂದಲೇ ಕಾರಿನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಗ್ರಾಮಸ್ಥರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.