ಕಲಬುರಗಿ : ಜನ ಪ್ರವಾಹದಿಂದ ಬಳಲುತ್ತಿದ್ದಾರೆ, ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ. ನನ್ನ ತೇಜೋವಧೆ ಮಾಡುವ ಬದಲು ಒಗ್ಗೂಡಿ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕು ಎಂದು ಸಂಸದ ಡಾ. ಉಮೇಶ ಜಾಧವ್ ಹೇಳಿದ್ದಾರೆ.
ತಾಲೂಕಿನ ಮಳಖೇಡ ಗ್ರಾಮದ ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನಾದಿಂದ ಬಳಲಿ, ನಂತರ ಹೃದಯ ಸಂಬಂಧಿ ಸಮಸ್ಯೆಗೆ ಗುರಿಯಾಗಿದ್ದೆ. ವೈದ್ಯರು ನಾಲ್ಕು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೂ ನನ್ನ ಕ್ಷೇತ್ರದ ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಆದರೆ, ಕೆಲವರು ಸುಳ್ಳು ಪ್ರಚಾರ ಮಾಡಿ, ಶಾಸಕರು ಮತ್ತು ಸಂಸದರು ನಾಪತ್ತೆಯಾಗಿದ್ದಾರೆ ಎಂದು ನನ್ನ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.