ಕರ್ನಾಟಕ

karnataka

By

Published : Jul 30, 2020, 6:25 PM IST

ETV Bharat / state

ಚಿಕಿತ್ಸೆ ಸಿಗದೆ ನಾನ್​ ಕೋವಿಡ್​ ರೋಗಿ ಸಾವು: ಡಿಸಿ ಕಚೇರಿಗೆ ಆಟೋದಲ್ಲಿ ಶವ ತಂದ ಸಂಬಂಧಿಕರು!

ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಮೃತನ ಸಂಬಂಧಿಕರು ಶವವನ್ನು ಆಟೋದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ತಂದಿದ್ದಾರೆ. ಚಿಕಿತ್ಸೆಗೆ ನಿರಾಕರಿಸಿದ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

The death of a non covid patient without treatment
ಚಿಕಿತ್ಸೆ ಸಿಗದೆ ನಾನ್​ ಕೋವಿಡ್​ ರೋಗಿ ಸಾವು

ಕಲಬುರಗಿ: ನಾನ್ ಕೋವಿಡ್ ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದು, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿಯೇ ರೋಗಿ ಸಾವನ್ನಪ್ಪಿದ್ದಾನೆ. ಯದುಲ್ಲಾ ಕಾಲೋನಿಯ ನಿವಾಸಿ ಅಯೂಬ್ ಪಟೇಲ್​(38) ಮೃತ ವ್ಯಕ್ತಿ.

ಕೊರೊನಾ ನೆಗೆಟಿವ್ ವರದಿ ಬಂದರೂ ಸಹ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಹಾಗಾಗಿ ರೋಗಿ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ ಅಯೂಬ್​​ನನ್ನು ಜಯದೇವ ಆಸ್ಪತ್ರೆಗೆ ಕರೆ ತರಲಾಗಿತ್ತು. ಕೋವಿಡ್ ವರದಿ ನೆಗೆಟಿವ್ ಎಂದು ಬಂದಿದೆ ಎಂದು ಹೇಳಿದ್ರೂ ವೈದ್ಯರು ಆಸ್ಪತ್ರೆಗೆ ಸೇರಿಸಿಕೊಂಡಿಲ್ಲ. ಬಳಿಕ ಮೂರ್ನಾಲ್ಕು ಆಸ್ಪತ್ರೆಗಳನ್ನು ಸುತ್ತುವಷ್ಟರಲ್ಲಿ ಸಾವು ಸಂಭವಿಸಿದೆ ಎಂದು ಆಯೂಬ್ ಸಹೋದರ ಹೇಳಿದ್ದಾರೆ.

ಚಿಕಿತ್ಸೆ ಸಿಗದೆ ನಾನ್​ ಕೋವಿಡ್​ ರೋಗಿ ಸಾವು

ತಾವೇ ಸ್ಟ್ರೆಚರ್​​ನಲ್ಲಿ ಕೊಂಡೊಯ್ದರೂ ಸಹ ಚಿಕಿತ್ಸೆ ನೀಡಲಿಲ್ಲ. ಕೂಡಲೇ ವೈದ್ಯರ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ. ಬಸವೇಶ್ವರ ಆಸ್ಪತ್ರೆ ಸೇರಿ ಎಲ್ಲಾ ಕಡೆಯೂ ಬೆಡ್ ಫುಲ್ ಆಗಿವೆ ಎಂದು‌ ಹೇಳುತ್ತಾರೆ ಎಂದು ಜಿಲ್ಲಾಧಿಕಾರಿ ಕಚೇರಿಗೇ ಆಟೋದಲ್ಲಿ ಶವ ತಂದ ಕುಟುಂಬಸ್ಥರು, ಚಿಕಿತ್ಸೆಗೆ ನಿರಾಕರಿಸಿದ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅರ್ಧ ಗಂಟೆ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಶವ ಇಟ್ಟುಕೊಂಡು ನಂತರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮೊನ್ನೆಯೂ ವಾಡಿ ಪಟ್ಟಣದ ಮಹಿಳೆ ವೆಂಟಿಲೇಟರ್ ಸಿಗದೆ ಸಾವನ್ನಪ್ಪಿದ್ದಳು. ಈವರೆಗೆ ಆರು ಜನ ನಾನ್ ಕೋವಿಡ್ ರೋಗಿಗಳು ಇದೇ ರೀತಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆ ಈ ನಡೆ ಜನರನ್ನು ಕೆರಳಿಸುವಂತೆ ಮಾಡಿದೆ.

ABOUT THE AUTHOR

...view details