ಸೇಡಂ: ಪಟ್ಟಣದ ಉದ್ಯಮಿ ಶುಕ್ರವಾರ ಬೆಳಗ್ಗೆ ನಿಗೂಢವಾಗಿ ಕಣ್ಮರೆಯಾಗಿದ್ದ ಘಟನೆ ನಡೆದು ಮೂರು ದಿನ ಕಳೆದರೂ ಇನ್ನೂ ಪತ್ತೆ ಕಾರ್ಯ ಮುಂದುವರೆದಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಕಣ್ಮರೆಯಾದ ಉದ್ಯಮಿಗಾಗಿ ಹುಡುಕಾಟ ತಾಲೂಕಿನ ಬಿಬ್ಬಳ್ಳಿ ಗ್ರಾಮದಲ್ಲಿ ಹರಿಯುವ ನದಿಯ ಪಕ್ಕದಲ್ಲಿ ಉದ್ಯಮಿ ಶಾಮರಾವ ಊಡಗಿ (55) ಅವರಿಗೆ ಸೇರಿದ ಬೈಕ್ ಮತ್ತು ಚಪ್ಪಲಿ ದೊರೆತಿದ್ದು, ಅವುಗಳ ಆಧಾರದ ಪೊಲೀಸರು ಮೀನುಗಾರರ ಸಹಾಯದಿಂದ ನಿರಂತರ ಪತ್ತೆ ಕಾರ್ಯ ಕೈಗೊಂಡಿದ್ದರು. ನಂತರ ಭಾನುವಾರ ಎನ್ಡಿಅರ್ಎಫ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಬೋಟ್ಗಳ ಸಹಾಯದಿಂದ ಪತ್ತೆ ಕಾರ್ಯ ಕೈಗೊಂಡಿತ್ತು. ಆದರೂ ಸಹ ಇಲ್ಲಿಯವರೆಗೂ ಉದ್ಯಮಿಯ ಸುಳಿವು ದೊರೆತಿಲ್ಲ.
ಉದ್ಯಮಿ ನಿಗೂಢ ಕಣ್ಮರೆ: ನದಿಯಲ್ಲಿ ಮುಂದುವರಿದ ಶೋಧ ಕಾರ್ಯ
ಸಾಮಾನ್ಯವಾಗಿ ವ್ಯಕ್ತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರೆ 24 ಗಂಟೆಗಳಲ್ಲಿ ದೊರೆಯಬೇಕು. ಆದರೆ 48 ಗಂಟೆ ಪೂರ್ಣಗೊಂಡರೂ ವ್ಯಕ್ತಿ ದೊರೆತಿಲ್ಲ. ಇದರಿಂದ ಉದ್ಯಮಿ ನದಿಗೆ ಧುಮುಕಿದ್ದಾನೆಯೇ ಅಥವಾ ಇಲ್ಲ ಎಂಬ ಅನುಮಾನ ಮೂಡತೊಡಗಿವೆ.
ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಮಳಖೇಡ ಪಿಎಸ್ಐ ಶಿವಶಂಕರ ಸಾಹು, ಸೇಡಂ ಪಿಎಸ್ಐ ಸುಶೀಲಕುಮಾರ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಸಹ ಸ್ಥಳದಲ್ಲೇ ಇದ್ದು, ಪತ್ತೆ ಕಾರ್ಯ ವೀಕ್ಷಿಸುತ್ತಿದ್ದಾರೆ.