ಕಲಬುರಗಿ: ರಾಜ್ಯಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾದ ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮದ ಪಾತ್ರಧಾರಿ ಹಾಗೂ ಸೂತ್ರಧಾರಿಗಳಿಗಾಗಿ ಸಿಐಡಿ ಶೋಧ ಕಾರ್ಯ ಮುಂದುವರೆಸಿದೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಶೋಧದಲ್ಲಿ ತೊಡಗಿರುವ ಸಿಐಡಿ ಹಲವು ಮಹತ್ವದ ಸಾಕ್ಷಿಗಳನ್ನು ಕಲೆ ಹಾಕುತ್ತಿದೆ. ಆರೋಪಿಗಳ ಬಂಧನಕ್ಕಿಂತ ಸಾಕ್ಷಿ ಸಂಗ್ರಹಕ್ಕೆ ಹೆಚ್ಚಿನ ಒತ್ತು ಕೊಡುತ್ತಿದೆ.
2021ರ ಅಕ್ಟೋಬರ್ 3ರಂದು 545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ರಾಜ್ಯಾದ್ಯಂತ 92 ಕೇಂದ್ರಗಳಲ್ಲಿ ಒಟ್ಟು 54,104 ಅಭ್ಯರ್ಥಿಗಳು ಪರೀಕ್ಷೆಗೆ ಬರೆದಿದ್ದರು. ಆದರೆ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆಯ ನಂತರ ಕೆಲವು ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆ ಸಿಐಡಿ ತನಿಖೆ ನಡೆಸಲಾಗುತ್ತಿದೆ.
ಜ್ಞಾನಜ್ಯೋತಿ ಕೇಂದ್ರದಲ್ಲಿ 7 ಅಭ್ಯರ್ಥಿಗಳ ಅಕ್ರಮ:ಜಿಲ್ಲೆಯಲ್ಲಿ ಒಟ್ಟು 11 ಪಿಎಸ್ಐ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿಲ್ಲೆಯಿಂದ 92 ಅಭ್ಯರ್ಥಿಗಳು ನೇಮಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಾಜಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರವೊಂದರಲ್ಲಿಯೇ 11 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.
ಇದರಲ್ಲಿ 7 ಅಭ್ಯರ್ಥಿಗಳು ಅಕ್ರಮದ ಹಾದಿಯಿಂದ ನೇಮಕ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿರುವುದು ಸಿಐಡಿ ತನಿಖೆಯಿಂದ ಬಯಲಾಗಿದೆ. ಇನ್ನುಳಿದ ನಾಲ್ವರಲ್ಲಿ ಇಬ್ಬರ ವಿಚಾರಣೆ ನಡೆದಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ 7 ಜನ ಅಭ್ಯರ್ಥಿಗಳು ಸೇರಿ ಒಟ್ಟು 16 ಜನರ ಬಂಧನವಾಗಿದೆ.