ಕಲಬುರಗಿ:ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಖಾಸಗಿ ವಾಹನ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿಗೆ ಇಳಿದಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಲಾಭ ಪಡೆದುಕೊಳ್ಳುತ್ತಿರುವ ಖಾಸಗಿ ವಾಹನ ಚಾಲಕರು, ಎರಡು-ಮೂರು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಜೇವರ್ಗಿ, ಶಹಾಪುರ, ಸೇಡಂ, ಹುಮನಾಬಾದ್, ಆಳಂದ, ಅಫಜಲಪುರ ಮತ್ತಿತರ ಕಡೆ ಖಾಸಗಿ ವಾಹನ ಸಂಚಾರ ಹೆಚ್ಚಾಗಿದೆ. ಕ್ರೂಸರ್, ಆಟೋ ಮಾತ್ರವಲ್ಲ ಕಾರುಗಳಲ್ಲಿ ಸಹ ಪ್ಯಾಸೆಂಜರ್ಗಳನ್ನು ಹತ್ತಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ.
ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ 30ರಿಂದ 40 ರೂಪಾಯಿ ದರಕ್ಕೆ 100ರಿಂದ 150, 200 ರೂಪಾಯಿವರೆಗೆ ದರ ವಸೂಲಿ ಮಾಡಲಾಗುತ್ತಿದೆ. ಆದರೂ ಅನಿವಾರ್ಯವಾಗಿ ಪ್ರಯಾಣಿಕರು ಹೋಗುತ್ತಿದ್ದಾರೆ. ಸಾರಿಗೆ ನೌಕರರು ದಿಢೀರಾಗಿ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಓದಿ:ಪ್ರಯಾಣಿಕರಿಗೆ ತೊಂದರೆಯಾದ್ರೆ ಅದಕ್ಕೆ ಸರ್ಕಾರವೇ ಹೊಣೆ: ಸತೀಶ್ ಜಾರಕಿಹೊಳಿ
ಇನ್ನು ಸಾರಿಗೆ ಬಸ್ ಬಂದ್ ಆಗಿರುವುದರಿಂದ ಖಾಸಗಿ ವಾಹನಗಳು ಆಡಿದ್ದೇ ಆಟ ಎಂಬಂತಾಗಿದೆ. ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದರಲ್ಲಿ ಸಾಮಾಜಿಕ ಅಂತರ ಪಾಲಿಸದೆ ಬೇಕಾಬಿಟ್ಟಿ ಜನರನ್ನು ವಾಹನದಲ್ಲಿ ತುಂಬುತ್ತಿದ್ದಾರೆ. ಇದರಿಂದ ಕೋವಿಡ್ ಹರಡುವ ಬಹುತೇಕ ಸಾಧ್ಯತೆ ಇದ್ದು, ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.