ಕರ್ನಾಟಕ

karnataka

ETV Bharat / state

ತೊಗರಿ ರಾಶಿ ಮಾಡುವುದರಲ್ಲಿ ನಿರತರಾಗಿರುವ ಕಲಬುರಗಿ ರೈತರು

ತೊಗರಿ ನಾಡು ಕಲಬುರಗಿಯಲ್ಲಿ ಅತಿಯಾದ ಮಳೆ ಹಾಗೂ ಪ್ರವಾಹಕ್ಕೆ ಒಂದಷ್ಟು ತೊಗರಿ ಬೆಳೆ ಹಾಳಾಗಿ ಹೋಗಿದೆ. ಅಳಿದುಳಿದ ಬೆಳೆ ಕಟಾವಿನ ಹಂತಕ್ಕೆ ಬಂದಿದ್ದು, ಜಿಲ್ಲೆಯ ಬಹುತೇಕ ಕಡೆ ತೊಗರಿಯ ಕಟಾವು ಪ್ರಕ್ರಿಯೆ ಭರದಿಂದ ಸಾಗಿದೆ.

Pegeon Pea  Harvesting in Kalburgi
ಕಲಬುರಗಿಯಲ್ಲಿ ಭರದಿಂದ ಸಾಗಿದೆ ತೊಗರಿಯ ರಾಶಿ

By

Published : Jan 8, 2021, 11:36 AM IST

ಕಲಬುರಗಿ :ತೊಗರಿ ಕಣಜ ಕಲಬುರಗಿ ಜಿಲ್ಲೆಯಲ್ಲಿ ತೊಗರಿಯ ರಾಶಿ ಭರದಿಂದ ಸಾಗಿದೆ. ಜಿಲ್ಲೆಯ ಬಹುತೇಕ ಕಡೆ ತೊಗರಿಯ ಕಟಾವು ನಡೆಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಕೆಲ ರೈತರು ಸಾಂಪ್ರದಾಯಿಕ ಪದ್ಧತಿಯಲ್ಲಿ ತೊಗರಿ ರಾಶಿ ನಡೆಸಿದರೆ, ಹೆಚ್ಚಿನ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ.

ದೇಶದ ಮೂಲೆ ಮೂಲೆಗಳಲ್ಲಿ ಕಲಬುರಗಿ ತೊಗರಿ ಬೇಡಿಕೆಯಿದೆ. ಜಿಲ್ಲೆಯ ಶೇ.70 ರಷ್ಟು ಪ್ರದೇಶದಲ್ಲಿ ತೊಗರಿಯ ಬಿತ್ತನೆ ಮಾಡಲಾಗುತ್ತಿದೆ. ಈ ವರ್ಷ 5 ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಆದರೆ, ಅತಿಯಾದ ಮಳೆ ಹಾಗೂ ಪ್ರವಾಹಕ್ಕೆ ಒಂದಷ್ಟು ಬೆಳೆ ಹಾಳಾಗಿ ಹೋಗಿದೆ. ಅಳಿದುಳಿದ ಬೆಳೆ ಕಟಾವಿನ ಹಂತಕ್ಕೆ ಬಂದಿದ್ದು, ಜಿಲ್ಲೆಯ ಬಹುತೇಕ ಕಡೆ ತೊಗರಿ ಕಟಾವು ಪ್ರಕ್ರಿಯೆ ಭರದಿಂದ ಸಾಗಿದೆ. ತೊಗರಿಯ ಕಟಾವು ಏಕ ಕಾಲಕ್ಕೆ ನಡೆಯುತ್ತಿರುವುದರಿಂದ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ, ಜೊತೆಗೆ ಕಾರ್ಮಿಕರ ಕೂಲಿ ದರವೂ ಹೆಚ್ಚಾಗಿದೆ. ಹೀಗಾಗಿ, ಹೆಚ್ಚಿನ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ.

ತೊಗರಿಯ ರಾಶಿಯಲ್ಲಿ ತೊಡಗಿದ ಕಲಬುರಗಿಯ ರೈತರು

ಸಾಂಪ್ರದಾಯಿಕ ಪದ್ಧತಿಯಲ್ಲಾದರೆ ತಿಂಗಳಾನುಗಟ್ಟಲೆ ತೊಗರಿಯ ಕಣ ಮಾಡಬೇಕಾಗುತ್ತದೆ. ತೊಗರಿ ಹೊಲದಿಂದ ರಾಶಿಯಾಗಿ ಬರುವುದಕ್ಕೆ ದೊಡ್ಡ ಸಾಹಸವನ್ನೇ ಮಾಡಬೇಕಾಗುತ್ತದೆ. ಯಂತ್ರಗಳು ಬಂದ ನಂತರ ರಾಶಿ ಮಾಡುವುದು ಅತ್ಯಂತ ಸರಳ ಹಾಗೂ ಸುಲಭವಾಗಿದೆ. ಆದರೆ, ಇದರಿಂದ ಹಲವಾರು ಅಡ್ಡ ಪರಿಣಾಮಗಳಿವೆ. ಒಂದಷ್ಟು ಭಾಗ ತೊಗರಿಯ ಧಾನ್ಯ ಚೆಲ್ಲಾಪಿಲ್ಲಿಯಾಗಿ ಹೊಲದಲ್ಲಿ ಚೆಲ್ಲಿ ಹೋಗುತ್ತಿದೆ. ಜಾನುವಾರುಗಳಿಗೆ ಮೇವು ಸಿಗದಂತಾಗುತ್ತದೆ. ಇವೆಲ್ಲವನ್ನು ಬದಿಗಿಟ್ಟಲ್ಲಿ ಯಂತ್ರಗಳಿಂದ ಅತ್ಯಂತ ಅನಕೂಲವಾಗಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಏಕ ಕಾಲಕ್ಕೆ ಹತ್ತಾರು ಎಕರೆ ಕಟಾವು ಮಾಡಬಲ್ಲ ದೊಡ್ಡ ಯಂತ್ರಗಳ ಜೊತೆಗೆ ತೊಗರಿ ರಾಶಿಗೆ ಸಣ್ಣ ಯಂತ್ರಗಳೂ ಬಂದಿವೆ. ತೊಗರಿ ಗಿಡವನ್ನು ಕಟ್ಟಿಗೆಯಿಂದ ಬಡಿದು, ನಂತರ ಸಣ್ಣ ಗಾತ್ರದ ಯಂತ್ರಗಳಿಗೆ ಹಾಕಿ ರಾಶಿ ಮಾಡುವ ಮತ್ತೊಂದು ವಿಧಾನವನ್ನೂ ರೈತರು ಅನುಸರಿಸುತ್ತಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದರೂ, ಅತಿಯಾದ ಮಳೆಯಿಂದ ಅರ್ಧದಷ್ಟು ಪ್ರದೇಶ ಹಾನಿಗೆ ತುತ್ತಾಗಿದೆ. ಇದ್ದ ಬೆಳೆಯಲ್ಲಿಯೂ ಸೂಕ್ತ ರೀತಿಯಲ್ಲಿ ಇಳುವರಿ ಬರುತ್ತಿಲ್ಲ. ಇದರಿಂದಾಗಿ ಈ ವರ್ಷ ನಷ್ಟ ಕಟ್ಟಿಟ್ಟ ಬುತ್ತಿ ಎಂದು ರೈತರು ಅಲವತ್ತುಕೊಂಡಿದ್ದಾರೆ.

ABOUT THE AUTHOR

...view details