ಕಲಬುರಗಿ:ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ವಿಚಾರಣೆಯನ್ನು ನವೆಂಬರ್ 07 ಕ್ಕೆ ಕಲಬುರ್ಗಿ ಹೈಕೋರ್ಟ್ ಪೀಠ ಮುಂದೂಡಿದೆ.
ಆಪರೇಷನ್ ಕಮಲ ಆಡಿಯೋ ಪ್ರಕರಣ: ಬಿಎಸ್ವೈಗೆ ತಾತ್ಕಾಲಿಕ ರಿಲೀಫ್ - ಆಪರೇಷನ್ ಕಮಲ ಆಡಿಯೋ ಪ್ರಕರಣ
ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾದ ಪ್ರಕರಣದ ತಡೆಯಾಜ್ಞೆ ತೆರವು ಮಾಡಲು ಸಲ್ಲಿಸಿದ ವಿಚಾರಣೆಯನ್ನು ಕಲಬುರಗಿ ಹೈಕೋರ್ಟ್ ಪೀಠ ಇಂದು ಕೈಗೆತ್ತಿಕೊಂಡಿತ್ತು.
ಹೈಕೋರ್ಟ್ ನಾಲ್ಕನೇ ಪೀಠದ ನ್ಯಾಯಮೂರ್ತಿ ಮಹ್ಮದ್ ನವಾಜ್ ಎದುರು ಇಂದು ವಾದ ಮಂಡನೆ ನಡೆಯಿತು. ಅರ್ಜಿದಾರ ಶರಣಗೌಡ ಕಂದಕೂರ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡನೆ ಮಾಡಿದರು. ಆದರೆ ಯಡಿಯೂರಪ್ಪ ಪರ ವಕೀಲ ಸಿ.ವಿ.ನಾಗೇಶ್ ಅವರು ಗೈರಾದ ಹಿನ್ನೆಲೆ ವಿಚಾರಣೆಯನ್ನು ನವೆಂಬರ್ 07ಕ್ಕೆ ನ್ಯಾಯಾಧೀಶರು ಮುಂದೂಡಿದರು.
ವಾದದಲ್ಲಿ ಏನಿತ್ತು?:ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಪಕ್ಷ ತೊರೆದು ಬಿಜೆಪಿ ಸೇರಿದರೆ ₹ 10 ಕೋಟಿ ಹಣ ನೀಡುವುದಾಗಿ ಯಡಿಯೂರಪ್ಪ ಆಫರ್ ನೀಡಿದ್ದರು. ಈಗ ಯಡಿಯೂರಪ್ಪ ಅವರೇ ಸಿಎಂ ಆಗಿದ್ದಾರೆ. ವಿಧಾನಸಭೆ ಚುನಾವಣೆಗೆ ₹ 25 ಲಕ್ಷ ವೆಚ್ಚದ ಮಿತಿಯಿದೆ. ಹೀಗಿರಬೇಕಾದರೆ ₹10 ಕೋಟಿ ಕೊಡೋದಾಗಿ ಹೇಳಿರೋದು ಆಮಿಷವಾಗುತ್ತದೆ. ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಹೀಗಾಗಿ ತಡೆಯಾಜ್ಞೆ ತೆರವುಗೊಳಿಸಿ ಪೊಲೀಸ್ ತನಿಖೆಗೆ ಅನುವು ಮಾಡಿಕೊಡಬೇಕೆಂದು ಕಂದಕೂರ ಪರ ನ್ಯಾಯವಾದಿ ರವಿವರ್ಮ ಕುಮಾರ್ ಪೀಠದ ಮುಂದೆ ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನಂತರ ತೀರ್ಪು ನೀಡೋದಾಗಿ ನ್ಯಾಯಾಧೀಶರು ತಿಳಿಸಿ ವಿಚಾರಣೆ ಮುಂದೂಡಿದ್ದರು. ಹೀಗಾಗಿ ಸದ್ಯಕ್ಕೆ ಬಿಎಸ್ವೈಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.