ಸೇಡಂ:ತಾಲೂಕಿನ ಸಂಗಾವಿ ಗ್ರಾಮ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದ್ದ 7 ಜನರನ್ನು ಕಡೆಗೂ ಎನ್ಡಿಆರ್ಎಫ್ ತಂಡ ತಡರಾತ್ರಿ ರಕ್ಷಿಸಿದೆ.
ಸಾವು ಗೆದ್ದೆ ಎಂದ ಪ್ರವಾಹ ಸಂತ್ರಸ್ತೆ, ಎನ್ಡಿಆರ್ಎಫ್ ತಂಡಕ್ಕೆ ಕೃತಜ್ಞತೆ ಮಧ್ಯರಾತ್ರಿ 2 ಗಂಟೆಗೆ ಕಾರ್ಯಾಚರಣೆಗಿಳಿದ ತಂಡ, ನಸುಕಿನ ಜಾವ 4 ಗಂಟೆಗೆ ಎರಡು ಚಿಕ್ಕ ಮಕ್ಕಳು ಸೇರಿದಂತೆ ಒಟ್ಟು 7 ಜನರನ್ನು ರಕ್ಷಣೆ ಮಾಡಿ ದಡ ಸೇರಿಸಿದೆ.
ನಂತರ ಬದುಕುಳಿದು ಬಂದ ನಾಗರಾಜ ದಂಪತಿ ತಮ್ಮ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ.
ವಸತಿ ಶಾಲೆಯ ಒಂದನೇ ಮಹಡಿ ಸಂಪೂರ್ಣ ಮುಳುಗಡೆಯಾಗಿ, ಎರಡನೇ ಮಹಡಿಗೆ ನೀರು ಬರಲಾರಂಭಿಸಿತ್ತು. ಕಡೆಯ ಅವಕಾಶ ಮೇಲ್ಚಾವಣಿಗೆ ಏರಲು ಮೆಟ್ಟಿಲುಗಳಿಲ್ಲದಿದ್ದರೂ ಪುಟ್ಟ ಕಂದಮ್ಮಗಳ ಪ್ರಾಣ ಉಳಿಸಿಕೊಳ್ಳಲು ಜೊತೆಯಲ್ಲಿದ್ದ ಸಲೀಮ್ ಎಂಬಾತನ ಸಹಾಯದಿಂದ ಹಗ್ಗದ ಮೂಲಕ ಕಟ್ಟಡ ಹತ್ತಿದೆವು. ಎಷ್ಟೇ ಸಮಯ ಕಳೆದರೂ ಯಾರೂ ಸಹಾಯಕ್ಕೆ ಬಾರದೇ ಇದ್ದಾಗ ಆಡಿಯೋ ಸಂದೇಶ ಕಳುಹಿಸಿದೆವು.
ಕಡೆಗೂ ನಮ್ಮ ಕೂಗನ್ನು ಆ ದೇವರು ಕೇಳಿಸಿಕೊಂಡಂತೆ, ಇಬ್ಬರು ಪುರುಷರು, 3 ಜನ ಮಹಿಳೆಯರು ಮತ್ತು ಒಂದೂವರೆ ವರ್ಷದ ಗಂಡು ಮತ್ತು 3 ವರ್ಷದ ಹೆಣ್ಣು ಮಗುವನ್ನು ಎನ್ಡಿಆರ್ಎಫ್ ತಂಡ ರಕ್ಷಿಸಿ, ನಮಗೆ ಮತ್ತೊಮ್ಮೆ ಜೀವದಾನ ನೀಡಿದೆ ಎಂದರು. ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಮಳಖೇಡ ಪಿಎಸ್‌ಐ ಶಿವಶಂಕರ ಸಾಹು ಮತ್ತು ಸಿಬ್ಬಂದಿ ನಿರಂತರವಾಗಿ ನಮ್ಮನ್ನು ರಕ್ಷಿಸುವಲ್ಲಿ ಶ್ರಮವಹಿಸಿದ್ದಾರೆ ಎಂದರು.