ಕಲಬುರಗಿ:ಜಿಲ್ಲೆಯಲ್ಲಿ ಸಹೋಧರರಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿದವನಿಗೆ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಕಮಲಾಪುರ ತಾಲೂಕಿನ ತಡಕಲ್ ಗ್ರಾಮದ ಚಂದ್ರಪ್ಪ ವಾಲಿಕಾರ (27) ಶಿಕ್ಷೆಗೆ ಗುರಿಯಾದ ವ್ಯಕ್ತಿ. ತಡಕಲ್ ಗ್ರಾಮದಲ್ಲಿ 2021ರ ಜನವರಿ 15 ರಂದು ಬೆಳಗ್ಗೆ 9ಗಂಟೆ ಸುಮಾರಿಗೆ ನೀಲೇಶ ಮೋರೆ ಹಾಗೂ ಈತನ ತಮ್ಮ ರಾಜು ಮೋರೆ ಎಂಬ ಇಬ್ಬರನ್ನು ಚಂದ್ರಪ್ಪ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟ ಮಾಡಲಾಗಿದೆ.
ಕೊಲೆ ಪ್ರಕರಣದ ಹಿನ್ನಲೆ ಏನು?:ಕೊಲೆಯಾದ ನೀಲೇಶ ಮೋರೆ ತನ್ನ ಮದುವೆಗೂ ಮುನ್ನ ಆರೋಪಿ ಚಂದ್ರಪ್ಪನ ಅಕ್ಕನ ಹಿಂದೆ ಬಿದ್ದಿದ್ದನಂತೆ, ನೀಲೇಶ ತನ್ನ ಮದುವೆ ನಂತರವೂ ಚಂದ್ರಪ್ಪನ ಅಕ್ಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಸಂಶಯಗೊಂಡ ಚಂದ್ರಪ್ಪ ಆಗಾಗ ನೀಲೇಶ ಜೊತೆ ಜಗಳ ಆಡ್ತಿದ್ದನಂತೆ. ಹೀಗಿರುವಾಗ 2021ರ ಜನವರಿ 15 ರಂದು ಬೆಳಗ್ಗೆ 9ಗಂಟೆ ಸುಮಾರಿಗೆ ನೀಲೇಶ ಹಾಗೂ ಆತನ ಸಹೋದರ ರಾಜು ಇಬ್ಬರು ನಡೆದುಕೊಂಡು ಹೋಗುವಾಗ ಚಂದ್ರಪ್ಪ ಮತ್ತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋಗಿದ್ದು, ಮಾರಕಾಸ್ತ್ರದಿಂದ ನೀಲೇಶನಿಗೆ ಕೊಚ್ಚಿ ಕೊಲೆ ಮಾಡಿದ್ದಾನೆ. ಜಗಳ ಬಿಡಿಸಲು ಬಂದ ರಾಜುನ ಮೇಲೆಯೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಹಿನ್ನೆಲೆ ರಾಜು ಕೂಡಾ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಈ ಕುರಿತು ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ವಿರುದ್ಧ 341, 504, 302 ಕಲಂ, 34 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ತನಿಖಾಧಿಕಾರಿ, ಅಂದಿನ ಗ್ರಾಮೀಣ ಠಾಣೆ ವೃತ್ತ ನಿರೀಕ್ಷಕ ಶಂಕರಗೌಡ ಪಾಟೀಲ್ ಅವರು ತನಿಖೆ ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಕುರಿತಾಗಿ ವಾದ ಪ್ರತಿವಾದ ಆಲಿಸಿದ ಕಲಬುರಗಿ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಕರೋಶಿ, ಆರೋಪಿ ಕೃತ್ಯ ಎಸಗಿರುವುದು ಸಾಬೀತಾದ ಹಿನ್ನಲೆ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ 3ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ತೆಲಿ ವಾದ ಮಂಡಿಸಿದ್ದರು.